ರಾಜ್ಯ

ಸಚಿವ ರಮೇಶ ಜಾರಕಿಹೊಳಿ-ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನಡುವೆ ಜಟಾಪಟಿ

ಬೆಳಗಾವಿ : ರಾಜ್ಯದ ಸಮ್ಮೀಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಮೊಟ್ಟ ಮೊದಲ ಬಾರಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಆಗಮಿಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸ್ವಾಗತ ಕೋರದಿರುವುದು ಚರ್ಚೆಗೆ ಕಾರಣವಾಗಿದೆ.

ಶಿಷ್ಟಾಚಾರದ ಅನ್ವಯ ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸ್ವಾಗತ ಕೊರುವುದು ಸಂಪ್ರದಾಯ. ಆದರೆ ಅದರಿಂದ ದೂರ ಉಳಿದ ಸಚಿವ ರಮೇಶ ಜಾರಕಿಹೊಳಿ ಸಂಪ್ರದಾಯ ಮುರಿಯುವ ಮೂಲಕ ಸಮ್ಮೀಶ್ರ ಸರಕಾರದಲ್ಲಿ ಎಲ್ಲವೂ ಸರಿಯಲ್ಲ. ಅಲ್ಲದೆ, ಸಚಿವ ರಮೇಶ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ.

ಇನ್ನೂ ಇದೇ ವೇಳೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಸ್ವಾಗತ ಕೋರಿದ್ದರು. ಬಳಿಕ ಸಚಿವರ ಗೈರು ಹಾಜರಾಗಿ ಕುರಿತಂತೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಸಚಿವರು ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ. ನನಗೆ ಈ ಬಗ್ಗೆ ಏನೂ ಕೇಳಬೇಡಿ ನಾನು ಅವರ ಪಿಆರ್ ಓ ಅಲ್ಲ ಎಂದು ಗರಂ ಆಗಿದ್ದರು.

ಅದಕ್ಕೆ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ತಿರುಗೇಟು ನೀಡಿದ್ದು, ಐದು ವರ್ಷ ಲಕ್ಷ್ಮಿ ಹೆಬ್ಬಾಳಕರ್ ಅವರು ನನ್ನ ಪಿಆರ್ ಓ ಆಗಿದ್ದರು. ಈಗ ಏಕೆ ಇಲ್ಲ ಎಂದು ಕುಟುಕಿದ್ದಾರೆ. ನಾನು ಈ ಹಿಂದೆ ಸಿದ್ದರಾಮಯ್ಯ ಅವರು ಬಂದಾಗಲೂ ರಿಸೀವ್ ಮಾಡಿಲ್ಲ. ಕುಮಾರಸ್ವಾಮಿನೂ ರಿಸೀವ್ ಮಾಡಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾನು ಪ್ರಚಾರ ಪ್ರಿಯ ಅಲ್ಲ ಎಂದು ಸ್ಪಷ್ಡಪಡಿಸಿದರು.

ಇದೇ ವೇಳೆ ಸದನಕ್ಕೆ ಹಲವು ಶಾಸಕರು ಚಕ್ಕರ್ ಹಾಕಿದ್ದು, ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿರುವುದು ಇಲ್ಲಿ ಸ್ಮರಿಸಬಹುದು.

ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಕಂಬನಿ ಮಿಡಿದು ಅಧಿವೇಶನ ನಾಳೆಗೆ ಮುಂದೂಡಲಾಗಿದೆ.

Please follow and like us:

Leave a Reply

Your email address will not be published. Required fields are marked *