ಹುಬ್ಬಳ್ಳಿ PRAJAKIRAN.COM : ಬಿಜೆಪಿ ಹಾಗೂ ಪಕ್ಷಾಂತರಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಅನೈತಿಕ ರಾಜಕಾರಣಕ್ಕೆ ಮತದಾರರು ಬೇಸತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರ ಮಾತಿನಲ್ಲಿ ಆರ್ಭಟವಿದೆ ಹೊರತು ಅಭಿವೃದ್ಧಿ ಕೆಲಸದಲ್ಲಿಲ್ಲ ಎಂದು ಕುಟುಕಿದರು.
ಬಿಜೆಪಿಯವರ ಪ್ರತಿಯೊಂದು ಹೆಜ್ಜೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಿದೆ. ಅವರಿಗೆ ಸಂವಿಧಾನ, ಕಾನೂನು, ನೈತಿಕತೆಯಲ್ಲಿ ನಂಬಿಕೆಯಿಲ್ಲ. ಯಾವುದೇ ಮಾರ್ಗವಾಗಲಿ ಅಧಿಕಾರ ಹಿಡಿಯಬೇಕು ಎಂದು ಹೊರಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನರ್ಹ ಶಾಸಕರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿ ಸರ್ಕಾರ ರಚನೆಯಾಗಿದ್ದೇ ವಾಮ ಮಾರ್ಗದಿಂದ ಎಂಬುದು ಎಲ್ಲಿಗೂ ಗೊತ್ತಿದೆ ಎಂದರು.
ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಹೊಸದೊಂದು ತಿರುವು ಬರಲಿದೆ ಎಂದ ಅವರು ದೇಶವನ್ನು ಲೂಟಿ ಹೊಡೆದು ಬಿಜೆಪಿಯವ್ರು ಮಾತ್ರ ಶ್ರೀಮಂತರಾಗಿದ್ದಾರೆ. ಇಡೀ ದೇಶ ಆರ್ಥಿಕ ಸಂಕಷ್ಟದಲ್ಲಿದೆ ಎಂದು ದೂರಿದರು.
ಮಹಾರಾಷ್ಟ್ರದಲ್ಲಿ ಪ್ರತಿಯೊಬ್ಬ ಶಾಸಕರಿಗೆ ನೂರು ಕೋಟಿ ರೂಪಾಯಿ ಆಫರ್ ಕೊಟ್ಟಿದ್ದಾರೆ. ರಾಜ್ಯದಲ್ಲಿಯೂ ತಲಾ ಇಪ್ಪತ್ತೈದು ಕೋಟಿ ಕೊಟ್ಟು ಶಾಸಕರನ್ನು ಖರೀದಿಸಿದ್ದಾರೆ. ರಾಜ್ಯದ ಶಾಸಕರು ಈಗ ನಮಗೂ ನೂರು ಕೋಟಿ ಕೊಡಿ ಎಂದು ಬಿಜೆಪಿ ನಾಯಕರನ್ನು ಕೇಳುತ್ತಿದ್ದಾರಂತೆ ಎಂದು ಛೇಡಿಸಿದರು.
ಇನ್ನೂ ಸ್ವಲ್ಪ ಶಾಸಕರನ್ನು ಹಿಡಿದುಕೊಂಡು ಬರುತ್ತೇವೆಂದು ಲಿಂಬಾವಳಿ ಹೇಳುತ್ತಿದ್ದಾರೆ. ಹೀಗಾದ್ರೆ ಚುನಾವಣೆಗೆ ಯಾಕೆ ಹೋಗಬೇಕು, ಜನರು ಮತ ಯಾಕೆ ಹಾಕಬೇಕು? ಎಂದು ಪ್ರಶ್ನಿಸಿದರು.
ಬಿಜೆಪಿಯವರದ್ದು ಕೇವಲ ನಾಟಕ, ಕಪಟತನ, ಸುಳ್ಳು ಹೇಳುವ ರಾಜಕೀಯ.ಭ್ರಷ್ಟರೆಲ್ಲ ಬಿಜೆಪಿ ಸೇರಿದ್ರೆ ಸಾಚಾಗಳಾಗುತ್ತಾರೆ ಅನ್ನೋದು ಬಿಜೆಪಿ ಸ್ಕೀಮ್ ಆಗಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಿರ್ಧಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು.ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಕ್ಕೂ ನಾವು ಬದ್ಧರಾಗಿರುತ್ತೇವೆ.ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ, ಉಪ ಚುನಾವಣೆಯ ಗೆಲುವೊಂದೇ ನಮ್ಮ ಗುರಿ ಎಂದು ದಿನೇಶ ಗುಂಡೂರಾವ್ ಸ್ಪಷ್ಟಪಡಿಸಿದರು.