ಧಾರವಾಡ PRAJAKIRAN.COM : ಬಿಡುವಿಲ್ಲದ ಕೆಲಸದ ಮಧ್ಯೆಯೂ ಮನಸ್ಸು ಮಾಡಿ ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಧಾರವಾಡ ಸಂಚಾರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮುರುಘೇಶ ಚನ್ನಣ್ಣವರ ಉತ್ತಮ ನಿರ್ದಶನ.
ಹೌದು ಅವರು ದಿನನಿತ್ಯದ ಸಂಚಾರ ದಟ್ಟಣೆ ನಿಯಂತ್ರಣದ ಜೊತೆಗೆ, ಗಣ್ಯರಿಗೆ ಸುಗಮ ಸಂಚಾರ ವ್ಯವಸ್ತೆ, ಬಂದೋಬಸ್ತ್, ವಾಹನ ತಪಾಸಣೆಗಳಂತಹ ದೊಡ್ಡ ಜವಾಬ್ದಾರಿಯ ನಡುವೆಯೂ ತಮ್ಮ ಕೆಲ ಸಮಯವನ್ನು ಸೈಕ್ಲಲಿಂಗ್, ಈಜು, ವಾಕಿಂಗ್, ರನಿಂಗ್ ಗಳಿಗೆ ಮೀಸಲಿಟ್ಟ ಪರಿಣಾಮ ಇದೀಗ ಅವರು ಲೋಹ ಪುರುಷನಾಗಿ ಹೊರಹೊಮ್ಮಿದ್ದಾರೆ.
ಸೋಮವಾರ ಕೊಲ್ಲಾಪೂರದ ಸ್ಪೋಟ್ಸ್ ಕ್ಲಬ್ ಆಯೋಜಿಸಿದ್ದ ಹಾಫ್ ಐರನ್ ಮ್ಯಾನ್ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ, ವಿಜಯ ಪತಾಕೆಯನ್ನು ಹಾರಿಸಿದ್ದಾರೆ.
ಸತತ ಹತ್ತು ಗಂಟೆಗಳಲ್ಲಿ ನಿರಂತರವಾಗಿ ೧.೯ ಕಿ.ಮೀ., ಈಜು, ೯೦ ಕಿ.ಮೀ. ಸೈಕಲಿಂಗ್ ಹಾಗೂ ೨೧.೧ ಕಿ.ಮೀ. ಓಡುವ ಮೂಲಕ ಸಾಧನೆ ಮೆರೆದಿದ್ದಾರೆ.
ಈ ಸ್ಪರ್ಧೆಯಲ್ಲಿ ದೇಶದ ೩೦೦ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದು, ಚೆನ್ನಣ್ಣವರ ಅವರೊಂದಿಗೆ ಧಾರವಾಡದ ತಾಲೂಕು ಕಚೇರಿ ಅಧಿಕಾರಿ ಸದಾನಂದ ಅಮರಾಪೂರ ಹಾಗೂ ಉದ್ಯಮಿ ಸಚಿನ ಬೆಳಗಾಂವಕರ ಸಹ ಹಾಫ್ ಐರನ್ ಮ್ಯಾನ್ ಸಾಧನೆಗೆ ಪಾತ್ರರಾದರು.
ವಿಶೇಷವೆಂದರೆ ಈ ಸವಾಲನ್ನು ಮುರುಘೇಶ ಕೇವಲ ಏಳುವರೆ ಗಂಟೆಗಳಲ್ಲಿ ಮುಕ್ತಾಯಗೊಳಿಸಿ ಹಾಫ್ ಐರನ್ ಮ್ಯಾನ್ ಪದಕಕ್ಕೆ ಭಾಜನರಾಗಿದ್ದಾರೆ. ಮಹಾರಾಷ್ಟ್ರದ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಹೊರತು ಪಡಿಸಿದರೆ ಈ ಸಾಧನೆ ಮಾಡಿದ ಮೂರನೇ ಪೊಲೀಸ ಅಧಿಕಾರಿ ಚೆನ್ನಣ್ಣವರ ಆಗಿದ್ದಾರೆ.
ಮುರುಘೇಶ ಚನ್ನಣ್ಣವರ ಸಾಧನೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ ಆಯುಕ್ತ ಆರ್. ದಿಲೀಪ ಸಂತಸ ವ್ಯಕ್ತಪಡಿಸಿದ್ದು, ಅವರಿಗೆ ಶೀಘ್ರದಲ್ಲಿಯೇ ಇಲಾಖೆಯಿಂದ ಸನ್ಮಾನ ಸಮಾರಂಭ ಆಯೋಜಿಸಿ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು PRAJAKIRAN.COM ದೊಂದಿಗೆ ಮಾತನಾಡಿದ ಮುರುಘೇಶ ಚೆನ್ನಣ್ಣವರ, ಈ ಸ್ಪರ್ಧೆ ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿತ್ತು. ಅದನ್ನು ಮಾಡುತ್ತೇನೆ ಎಂಬ ವಿಶ್ವಾಸ ಮನದಲ್ಲಿತ್ತು.
ಹೀಗಾಗಿ ಏಕಕಾಲಕ್ಕೆ ಒಂದನಂತರ ನಂತರ ಒಂದು ಪೂರ್ಣಗೊಳಿಸಿದೆ. ಈಜು, ಸೈಕಲಿಂಗ್ ಹಾಗೂ ಓಡುವುದು ಕಷ್ಟಕರ. ನಿರಂತರವಾಗಿ ಈಜಿ, ಏರಿಳಿತಗಳ ರಸ್ತೆಯಲ್ಲಿ ಸೈಕಲಿಂಗ್ ಮಾಡಿ ಕೊನೆಗೆ ೨೧ ಕಿ.ಮೀ. ಓಡುವುದು ಕಷ್ಟಸಾಧ್ಯವಾಯಿತು ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ಇದಕ್ಕಾಗಿ ನಾಲ್ಕೈದು ತಿಂಗಳಿಂದ ಮಾರ್ಗದರ್ಶನ ಪಡೆದ ಪರಿಣಾಮ ಇದು ಸಾಧ್ಯವಾಯಿತು. ಈ ಸಾಧನೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ, ಸಿಬ್ಬಂದಿ ಹಾಗೂ ಕುಟುಂಬದ ಸಹಕಾರ ಸಾಕಷ್ಟಿದೆ. ಇದೇ ಸಹಕಾರ ಮುಂದೆಯೂ ದೊರೆತರೆ ಪೂರ್ಣ ಪ್ರಮಾಣದ ಐರನ್ ಮ್ಯಾನ್ ಆಗಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.