ಹುಬ್ಬಳ್ಳಿ : ಈ ಹಿಂದಿನ ಸಿದ್ದರಾಮಯ್ಯ ಅವರ ಸರಕಾರದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಅವರು ಕೈಗೊಂಡ ಕೆಲವು ನಿರ್ಧಾರ ಐತಿಹಾಸಿಕವಾಗಿದ್ದವು. ಬಡವರ ಮನೆ ನಿರ್ಮಾಣಕ್ಕೆ ಅವರು ಕೈಗೊಂಡ ದಿಟ್ಟ ನಿರ್ಧಾರದಿಂದಾಗಿ ರಾಜ್ಯದೆಲ್ಲಡೆ ದೊಡ್ಡ ಪ್ರಮಾಣದಲ್ಲಿ ವಸತಿಯೋಜನೆಗೆ ಜಮೀನು ಖರೀದಿಸಲು ಸಹಾಯಕವಾಗಿತ್ತು ಎಂದು ನವಲಗುಂದ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ಸ್ಮರಿಸಿದ್ದಾರೆ.
ರಾಜ್ಯ ವಿಧಾನ ಸಭೆಯಲ್ಲಿ ಹೋರಾಟ ನಡೆಸಿದ ಪರಿಣಾಮ ನನ್ನ ಒತ್ತಡಕ್ಕೆ ಮಣಿದು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಭೂಮಿ ಖರೀದಿಗೆ ಪ್ರತಿ ಎಕರೆಗೆ ೫೦ ಲಕ್ಷ ರೂ, ನಗರ ಕೇಂದ್ರದಲ್ಲಿ ಪ್ರತಿ ಎಕರೆಗೆ ೨೫ ಲಕ್ಷ, ಪಟ್ಟಣ ಪ್ರದೇಶದಲ್ಲಿ ೧೫ ಲಕ್ಷ ರೂ ಬೆಲೆ ನೀಡಿ ರೈತರಿಂದ ಜಮೀನು ಖರೀದಿಗೆ ಸರಕಾರದ ಒಪ್ಪಿಗೆ ಸೂಚಿಸಿ, ಕಾನೂನು ಜಾರಿಗೊಳಿಸುವಂತೆ ಮಾಡಿದ್ದರು.
ಅದರ ಪರಿಣಾಮವಾಗಿಯೇ ನವಲಗುಂದ, ಅಣ್ಣಿಗೇರಿ ಪಟ್ಟಣದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ೭೦ ಎಕರೆ ಜಮೀನು ಖರಿದೀಸಲು ಸಾಧ್ಯವಾಗಿತ್ತು. ಅವರ ಆ ದೂರ ದೃಷ್ಟಿಯ ಫಲವಾಗಿ ನವಲಗುಂದ ವಿಧಾನ ಸಭಾ ಕ್ಷೇತ್ರದ ನವಲಗುಂದ, ಹುಬ್ಬಳ್ಳಿ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಎರಡು ನೂರು ಎಕರೆಗೂ ಅಧಿಕ ಭೂಮಿ ಖರೀದಿಸಲು ಸಹಾಯವಾಗಿದೆ. ಅಲ್ಲದೆ, ರೈತರು ಕೂಡ ಬಡವರಿಗಾಗಿ ತಮ್ಮ ಜಮೀನು ಬಿಟ್ಟುಕೊಡಲು ತಾವಾಗಿಯೇ ಮುಂದೆಬಂದರು ಎಂದು ಎನ್.ಹೆಚ್.ಕೋನರಡ್ಡಿ ತಿಳಿಸಿದ್ದಾರೆ.
ವಸತಿ ಸಚಿವರಾಗಿದ್ದ ಅಂಬರೀಷ್ ಅವರು ಕನ್ನಡ ಚಿತ್ರರಂಗದ ಮೇರು ನಟ ಎಂಬುದನ್ನು ಮರೆತು ಜನಸಾಮಾನ್ಯರೊಂದಿಗೆ ಸ್ನೇಹಿತರ ರೀತಿಯಲ್ಲಿ ಬೆರೆತು ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಜನತಾ ಪರಿವಾರದಿಂದ ಅವರೊಂದಿಗೆ ಒಡನಾಟ ಹೊಂದಿದ್ದೆ.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡಾಗ ಕೂಡ ಎಲ್ಲರೊಂದಿಗೆ ಅದೇ ಹಳೆಯ ಉತ್ತಮ ಒಡನಾಟ ಹೊಂದಿದ್ದರು. ಪಕ್ಷಭೇದ ಮರೆತು ಎಲ್ಲರಿಗೊ ಆಪ್ತರಾಗಿದ್ದರು. ಅವರ ನಿಧನ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ನವಲಗುಂದ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ಕಂಬನಿ ಮಿಡಿದಿದ್ದಾರೆ. .