ಬೆಂಗಳೂರು : ಕಳೆದ ಹಲವು ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ರೈಲ್ವೆ ಸಚಿವ ಜಾಫರ್ ಷರೀಫ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು 1933ರ ನವೆಂಬರ್ 3ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ್ದರು. ಜಾಪರ್ ಷರೀಫ್ ಅವರಿಗೆ 85 ವಯಸ್ಸಾಗಿತ್ತು. ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದರು. ಅವರ ನಿಧನಕ್ಕೆ ಶಾಸಕ ಕೆ. ಸುಧಾಕರ್ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಇಡೀ ನಾಡಿನ ಮುಸ್ಲಿಂ ಸಮುದಾಯದ ನಾಯಕತ್ವ ವಹಿಸಿದ್ದ ಜಾಫರ್ ಷರೀಫ್ ಅವರು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಲು ಬಯಸಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಹಲವು ಭಾರಿ ಲೋಕಸಭೆಯನ್ನು ಪ್ರತಿನಿಧಿಸಿದ್ದರು. 1991ರಿಂದ 1995ರವರೆಗೆ ಕೇಂದ್ರ ಸಚಿವರಾಗಿದ್ದರು.
ಕೇಂದ್ರ ರೈಲ್ವೇ ಸಚಿವರಾಗಿದ್ದ ಜಾಫರ್ ಷರೀಫರ್ ಕೊಡುಗೆ ಅಪಾರ. ನಾಡಿನ ಅನೇಕ ರೈಲ್ವೇ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ತಂದಿದ್ದರು. ದೊಡ್ಡ ಮಟ್ಟದ ಕೊಡುಗೆ ನೀಡಿದ್ದರು. ಅವರನ್ನು ಕೇವಲ ಅಲ್ಪಸಂಖ್ಯಾತ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.