ಹುಬ್ಬಳ್ಳಿ prajakiran.com : ರೇಲ್ವೆ ಇಲಾಖೆಯೂ 10 ದಿನದಲ್ಲಿ 80 ಸಾವಿರ ಬೆಡ್ಗಳ ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಿದೆ.
ಹುಬ್ಬಳ್ಳಿ ನೈರುತ್ಯ ರೇಲ್ವೆ ವತಿಯಿಂದ 312 ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಅವರು ಶುಕ್ರವಾರ ಹುಬ್ಬಳ್ಳಿಯ ರೈಲ್ವೇ ವರ್ಕಶಾಪ್ ನಲ್ಲಿ ನಿರ್ಮಿಸಲಾಗಿರುವ ಐಸೋಲೇಷನ್ ಬೋಗಿಗಳನ್ನು ವೀಕ್ಷಿಸಿ ನಂತರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಂತೆ ದೇಶಾದ್ಯಂತ 20 ಸಾವಿರ ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ 5000 ಸ್ಲೀಪರ್ ಬೋಗಿಗಳನ್ನು ಐಸೋಲೇಷನ್ ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.
ಒಟ್ಟು 3,20,000 ಐಸೋಲೇಷನ್ ಬೆಡ್ಗಳನ್ನು ರೇಲ್ವೇ ಇಲಾಖೆಯಿಂದ ನಿರ್ಮಿಸುವ ಗುರಿ ಹೊಂದಲಾಗಿದೆ.
ಈಗ ನಿರ್ಮಿಸಿರುವ ಐಸೋಲೇಷನ್ ಬೋಗಿಗಳನ್ನು ಆರೋಗ್ಯ ಇಲಾಖೆ ಹಾಗೂ ಗೃಹ ಇಲಾಖೆ ನಿರ್ದೇಶನದ ಮೇರೆಗೆ, ಅಗತ್ಯ ಇರುವ ಕಡೆ ಸೇವೆಗಾಗಿ ಕಳುಹಿಸಿಕೊಡಲಾಗುವುದು.
ಕರೋನಾ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಐಸೋಲೇಷನ್ ಬೋಗಿಗಳಲ್ಲಿ ಇರಿಸಿ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ನೈರುತ್ಯ ರೇಲ್ವೇಯ ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗ ಹಾಗೂ ವರ್ಕ್ ಶಾಪ್ಗಳಲ್ಲಿ 312 ಐಸೋಲೇಷ್ಬೋಗಿಗಳನ್ನು ನಿರ್ಮಿಸಲಾಗಿದೆ.
ಇಲಾಖೆಯು ಕರೋನಾ ದಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಸದ್ಯ ಎಲ್ಲಾ ಪ್ರಯಾಣಿಕರ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಸಲುವಾಗಿ ಸರುಕು ಸಾಗಾಣಿಕೆ ರೈಲುಗಳು ಸಂಚಾರ ನಡೆಸುತ್ತಿವೆ. ಇಲಾಖೆ ನೌಕರರು ಹಗಲಿರುಳು ಶ್ರಮಿಸಿ ಐಸೋಲೇಷನ್ ಕೋಚ್ಗಳನ್ನು ನಿರ್ಮಿಸಿದ್ದಾರೆ.
ರೇಲ್ವೇ ಪೊಲೀಸ್ ವತಿಯಿಂದ ಪ್ರತಿ ವಿಭಾಗದಲ್ಲೂ ಊಟ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಸ್ಥಿತಿಯನ್ನು ಅವಲೋಕಿಸಿ ಲಾಕ್ ಡೌನ್ ಕುರಿತು ನಿರ್ಧಾರ ಕೈಗೊಳ್ಳಲಿವೆ. ಐಸೋಲೇಷನ್ ಬೋಗಿಗಳನ್ನು ನಿರ್ಮಿಸುವಲ್ಲಿ ಶ್ರಮವಹಿಸಿದ ಎಲ್ಲಾ ರೇಲ್ವೇ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕೋವಿಡ್-19 ಲಕ್ಷಣ ಕಾಣಿಸಿಕೊಳ್ಳವ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಬಂದು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ನೈರುತ್ಯ ರೇಲ್ವೇ ಮುಖ್ಯ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್, ಹೆಚ್ಚುವರಿ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಮಿಶ್ರಾ, ಹುಬ್ಬಳ್ಳಿ ಸಿ.ಡಬ್ಲೂ.ಮ್ ನೀರಜ್ ಜೈನ್ ಉಪಸ್ಥಿತರಿದ್ದರು.