ರಾಜ್ಯ

ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಸಮ್ಮತಿ ಸೂಚಿಸಿದ ಬಿಜೆಪಿ ಹೈಕಮಾಂಡ್

ನವದೆಹಲಿ Prajakiran.com : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯದ ಬಿಜೆಪಿ ಸರಕಾರಕ್ಕೆ ತಲೆ ನೋವಾಗಿದ್ದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಸಮ್ಮತಿ ಸೂಚಿಸಿದೆ.

ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ವೇಳೆ ರಾಜ್ಯದ ವಿದ್ಯಮಾನಗಳ ಜೊತೆಗೆ ಪಕ್ಷದ ಅನೇಕ ವಿಷಯಗಳ ಬಗ್ಗೆ ರಾಷ್ಟ್ರೀಯ ನಾಯಕರು ಮಾರ್ಗದರ್ಶನ ನೀಡಿದರು ಎಂದು ತಿಳಿದುಬಂದಿದೆ.

ಇದರಿಂದಾಗಿ ಬಹುತೇಕ ಭಾನುವಾರ ಇಲ್ಲವೇ ಸೋಮವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮೂಹರ್ತ ನಿಗದಿಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಉಪಚುನಾವಣೆಯಲ್ಲಿ ಗೆದ್ದ ಹನ್ನೊಂದು ಶಾಸಕರ ಪೈಕಿ ಹತ್ತು ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಸನ್ನಿಹಿತವಾಗಿದ್ದು, ಇನ್ನೂಳಿದ ಮೂವರು ಮೂಲ ಬಿಜೆಪಿ ಶಾಸಕರು ಯಡಿಯೂರಪ್ಪ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ.

ಹನ್ನೊಂದು ಶಾಸಕರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಕಾಗವಾಡದ ಶ್ರೀಮಂತ ಪಾಟೀಲ, ಹಿರೇಕೆರೂರಿನ ಬಿ.ಸಿ. ಪಾಟೀಲ, ಯಲ್ಲಾಪುರದ ಶಿವರಾಮ ಹೆಬ್ಬಾರ, ಹೊಸಪೇಟೆಯ ಆನಂದ ಸಿಂಗ್, ಚಿಕ್ಕಬಳ್ಳಾಪುರದ ಡಾ. ಸುಧಾಕರ್, ಕೆ.ಆರ್. ಪುರಂನ ಬೈರತಿ ಬಸವರಾಜ, ಯಶವಂತಪುರದ ಎಸ್.ಟಿ. ಸೋಮಶೇಖರ, ಮಹಾಲಕ್ಷ್ಮಿ ಲೇ ಔಟ್ ನ ಕೆ. ಗೋಪಾಲಯ್ಯ, ಕೆ.ಆರ್. ಪೇಟೆಯ ನಾರಾಯಣಗೌಡ ಸಚಿವರಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಈ ಪೈಕಿ ಅಥಣಿ ಶಾಸಕ ಮಹೇಶ ಕುಮಟಳ್ಳಿ ಒಬ್ಬರನ್ನು ಹೊರತು ಪಡಿಸಿ ಎಲ್ಲರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿರುವ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿರುವುದರಿಂದ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕಾಗವಾಡದ ಶ್ರೀಮಂತ ಪಾಟೀಲ ಹಾಗೂ ಅಥಣಿಯ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ಅನುಮಾನವಿತ್ತು. ಇದೀಗ ಕೇವಲ ಮಹೇಶ ಕುಮಟಳ್ಳಿ ಒಬ್ಬರೇ ಔಟ್ ಆಗುವ ಸಾಧ್ಯತೆಗಳಿವೆ.

ಇದಲ್ಲದೆ, ಮೂಲ ಬಿಜೆಪಿಯಿಂದ ಹಿರಿಯ ಶಾಸಕರಾದ ಉಮೇಶ ಕತ್ತಿ, ಅರವಿಂದ ಲಿಂಬಾವಳಿ ಹಾಗೂ ಎ. ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಅಲ್ಲದೆ, ಮುಂದಿನ ಒಂದು ವರ್ಷದವರೆಗೆ ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಬಗ್ಗೆ ಯಾವುದೇ ಪ್ರಸ್ತಾವನೆ ಸಲ್ಲಿಸದಂತೆ ಹೈಕಮಾಂಡ್ ಸೂಚಿಸಿದೆ.

ಇದರಿಂದಾಗಿ ಮೂರು ಡಿಸಿಎಂಗಳು ಹಾಗೂ ಹಾಲಿ ಸಚಿವರು ನಿರಾಳವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *