ಧಾರವಾಡ : ಧಾರವಾಡವು ವಿದ್ಯಾರ್ಥಿ ದೆಸೆಯಿಂದಲೂ ಬದುಕನ್ನು ಕಟ್ಟಿಕೊಟ್ಟಿದೆ. ವಿದ್ಯಾರ್ಥಿ ಜೀವನದಿಂದ ಹಿಡಿದು ಜಿಲ್ಲಾಧಿಕಾರಿಯಾಗಿ ಸೇವೆಗೈದ ಧಾರವಾಡ ಪ್ರತಿ ಕ್ಷಣವೂ ನನಗೆ ಅವಿಸ್ಮರಣೀಯವಾಗಿವೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಅವರು ಆಲೂರು ವೆಂಕಟರಾವ್ ಸಭಾಭವನದಲ್ಲಿ ಗುರುವಾರ ಸಂಜೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳು ಪರಿಹಾರವಾದರೆ ಜನರು ರಾಜಧಾನಿಗೆ ಹೋಗುವುದು ತಪ್ಪುತ್ತದೆ. ನನಗಿಂತಲೂ ಸಮರ್ಥವಾದ ದಕ್ಷ ಅಧಿಕಾರಿ ಎಂ.ದೀಪಾ ಅವರು ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆಯ ಹೆಸರು ಇನ್ನಷ್ಟು ಎತ್ತರಕ್ಕೇರುವ ಭರವಸೆ ಇದೆ. ನನ್ನ ಕೊನೆಯ ಉಸಿರುವವರೆಗೂ ಧಾರವಾಡದ ಸೇವಾ ಅವಧಿಯನ್ನು ಹೃದಯದಲ್ಲಿಟ್ಟುಕೊಳ್ಳುತ್ತೇನೆ ಎಂದರು.
ನೂತನ ಜಿಲ್ಲಾಧಿಕಾರಿ ಎಂ.ದೀಪಾ ಮಾತನಾಡಿ, ಉತ್ತರ ಕರ್ನಾಟಕದ ಗದಗ,ಬೆಳಗಾವಿ, ಧಾರವಾಡಗಳಲ್ಲಿ ಈಗಾಗಲೇ ಕೆಲಸ ಮಾಡಿದ ಅನುಭವವಿದೆ.ಈ ಭಾಗದ ಜನರ ಕರ್ತವ್ಯಶೀಲ ಮನೋಭಾವದ ಬಗ್ಗೆ ಗೌರವವಿದೆ.ಇಲ್ಲಿನ ಆಹಾರ ಪದ್ಧತಿ,ಸಂಸ್ಕೃತಿ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.
ಇದೇ ವೇಳೆ ಡಾ.ಎಸ್.ಬಿ.ಬೊಮ್ಮನಹಳ್ಳಿ ದಂಪತಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ,ಗೌರವಿಸಲಾಯಿತು.ನೂತನ ಜಿಲ್ಲಾಧಿಕಾರಿ ಎಂ.ದೀಪಾ ಅವರನ್ನು ಸ್ವಾಗತಿಸಲಾಯಿತು.
ಜಿ.ಪಂ.ಸಿಇಓ ಸ್ನೇಹಲ್ ಆರ್ , ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಡಿಸಿಪಿ ಬಿ.ಎಸ್.ನೇಮಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಮನೋಹರ ಮಂಡೋಲಿ,ಎಸ್. ಜಿ.ಕೊರವರ್, ಟಿ.ಎಸ್.ರುದ್ರೇಶಪ್ಪ, ರಮೇಶ ಕೋನರಡ್ಡಿ, ಮಂಜುನಾಥ ಡೊಳ್ಳಿನ, ಎಸ್.ಕೆ.ರಂಗಣ್ಣವರ, ಪ್ರಕಾಶ ಕುದರಿ,ಶೇಖರ್ ಜಿ.ಡಿ. ಉಪಸ್ಥಿತರಿದ್ದರು.