ಧಾರವಾಡ : ಬೆಳಗಾವಿ ವಿಭಾಗದ ಎಲ್ಲ ೯ ಜಿಲ್ಲೆಗಳ ಇಲಾಖೆಯ ಕಛೇರಿಗಳಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿಗಾಗಿ ನ. ೨೫ ರವಿವಾರದ ರಜಾ ದಿನದಂದು ಕಡತ ಯಜ್ಞ ಕೈಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ವಲಯದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಶನಿವಾರ ಆದೇಶ ಹೊರಡಿಸಿದ್ದಾರೆ.
ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಕಳೆದ ೯ ತಿಂಗಳಲ್ಲಿ ಇಲಾಖೆಗೆ ಹೊಸ ಕಾಯಕಲ್ಪ ನೀಡುವಲ್ಲಿ ಶಾಲಾ ಸಂದರ್ಶನವೂ ಸೇರಿದಂತೆ ಹಲವಾರು ಹೊಸತು ಉಪಕ್ರಮಗಳನ್ನು ಕೈಕೊಂಡಿದ್ದಾರೆ. ಬೆಳಗಾವಿ ವಿಭಾಗದ ಎಲ್ಲ ೯ ಜಿಲ್ಲೆಗಳ ಡಿಡಿಪಿಐ ಕಛೇರಿಗಳು, ಡಯಟ್ ಕಛೇರಿಗಳು, ಎಲ್ಲ ೫೯ ತಾಲೂಕುಗಳ ಬಿಇಓ ಕಛೇರಿಗಳು, ವಿಭಾಗದ ವ್ಯಾಪ್ತಿಯಲ್ಲಿ ನಗರದ ಸಿಸ್ಲೆಪ್-ಕರ್ನಾಟಕ, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ) ಹಾಗೂ ಇತರೇ ಅಧೀನ ಕಛೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿ ಕಡತ ಯಜ್ಞ ಕೈಕೊಳ್ಳುವಂತೆ ತುರ್ತು ಆದೇಶ ನೀಡಿದ್ದಾರೆ.
ಬಾಕಿ ಪ್ರಕರಣಗಳ ವಿಲೇವಾರಿ : ಕಡತ ಯಜ್ಞದ ಸಂದರ್ಭದಲ್ಲಿ ವಿಶೇಷವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರ ವೇತನ ಬಡ್ತಿ ಪ್ರಕರಣಗಳು, ಎಚ್.ಆರ್.ಎಂ.ಎಸ್. ಪ್ರಕರಣಗಳು, ಖಾಯಂ ಪೂರ್ವ ಸೇವಾ ಅವಧಿ ಘೋಷಣೆ, ಕಾಲಮಿತಿ ಬಡ್ತಿ, ಸ್ವಯಂಚಾಲಿತ ಬಡ್ತಿ, ೨೦, ೨೫ ಹಾಗೂ ೩೦ ವರುಷಗಳ ವಿಶೇಷ ಬಡ್ತಿ ಪ್ರಕರಣಗಳು, ವೇತನ ಪರಿಷ್ಕರಣೆ, ಸೇವಾ ಪುಸ್ತಕದ ನಮೂದುಗಳು, ಎಲ್.ಐ.ಸಿ. ಕಟಾವಣೆÉಗಳು ಹಾಗೂ ವೇತನ ಸ್ಲಿಪ್ದಲ್ಲಿಯ ವ್ಯತ್ಯಾಸಗಳೂ ಸೇರಿದಂತೆ ಎಲ್ಲ ಬಾಕಿ ಪ್ರಕರಣಗಳ ಕಡತಗಳನ್ನು ಪೂರ್ಣ ಪರಿಶೀಲಿಸಿ ನಿಯಮಾನುಸಾರ ಇತ್ಯರ್ಥಗೊಳಿಸಲು ಸೂಚಿಸಲಾಗಿದೆ.
ಬೆಳಗಾವಿ ವಿಭಾಗದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರು ತಮ್ಮ ಬಾಕಿ ಪ್ರಕರಣಗಳಿದ್ದಲ್ಲಿ ತಪ್ಪದೇ ತಾಲೂಕಿನ ಬಿಇಓ ಕಛೇರಿಯನ್ನು ಸಂಪರ್ಕಿಸಿ ಬಾಕಿ ಕಡತಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಆಯುಕ್ತರು ಸೂಚಿಸಿದ್ದಾರೆ. ವಿಭಾಗದ ಎಲ್ಲ ಬಿಇಓ, ಡಿಡಿಪಿಐ, ಡಯಟ್ ಪ್ರಿನ್ಸಿಪಾಲರು ಸೇರಿದಂತೆ ಎಲ್ಲ ಅಧಿಕಾರಿಗಳು ಕಛೇರಿಯಲ್ಲಿ ಹಾಜರಿದ್ದು ತಮ್ಮ ಸಿಬ್ಬಂದಿಯೊಂದಿಗೆ ಪೂರ್ಣದಿನ ಕಡತ ಯಜ್ಞದಲ್ಲಿ ತೊಡಗಿಸಿಕೊಳ್ಳುವಂತೆ, ಜೊತೆಗೆ ಕಡತ ಯಜ್ಞ ಜರುಗಿಸಿದ ಸಂಪೂರ್ಣ ವಿವರಗಳನ್ನು ತಮ್ಮ ಕಛೇರಿಗೆ ಒದಗಿಸುವಂತೆ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಆದೇಶ ನೀಡಿದ್ದಾರೆ.