ಹುಬ್ಬಳ್ಳಿ : ಸಾರ್ವಜನಿಕರಿಗೆ ಪೊಲೀಸ್ರಿಂದ ರಕ್ಷಣೆ ದೊರೆಯುತ್ತದೆ ಎಂಬ ಭಾವನೆ ಮೂಡಬೇಕು. ದರ್ಪದಿಂದ ವರ್ತಿಸದೇ ಸಾರ್ವಜನಿಕ ಸ್ನೇಹಿ ಪೊಲೀಸ್ರಾಗಿ ಕರ್ತವ್ಯಗಳನ್ನು ದಕ್ಷತೆಯಿಂದ ನಿರ್ವಹಿಸಿ ಎಂದು ಸಿಐಡಿ ಆರ್ಥಿಕ ಅಪರಾಧಗಳ ಮಹಾ ನಿರೀಕ್ಷಕರು ಹಾಗೂ ಬೆಂಗಳೂರು ಪೊಲೀಸ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಹೇಮಂತ ಎಮ್ ನಿಂಬಾಳ್ಕರ್ ಹೇಳಿದರು.
ಅವರು ಹುಬ್ಬಳ್ಳಿಯ ಗೋಕುಲ ರಸ್ತೆಯ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಹೊಸ ಸಿ.ಎ.ಆರ್. ಕವಾಯತು ಮೈದಾನದಲ್ಲಿ ಇಂದು ಜರುಗಿದ ಕೆಎಸ್ಐಎಫ್ ಪೊಲೀಸ್ ಕಾನ್ಸ್ಟೇಬಲ್ಗಳ ೫ನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಪಥ ಸಂಚಲನದ ಪರಿವೀಕ್ಷಣೆ ಮತ್ತು ಬಹುಮಾನ ವಿತರಣೆ ಮಾಡಿ ಪ್ರಶಿಕ್ಷಣಾರ್ಥಿಗಳನ್ನು ಕುರಿತು ಮಾತನಾಡಿದರು.
ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿ ಅವಧಿಯಲ್ಲಿ ನಿಮಗೆ ಸಾರ್ವಜನಿಕರೊಂದಿಗೆ ದರ್ಪದಿಂದ ವರ್ತಿಸಿವುದನ್ನು ಕಲಿಸುವುದಿಲ್ಲ, ಆದರೆ ಹಲವಾರು ಬಾರಿ ಪೊಲೀಸರು ಸಾರ್ವಜನಿಕರೊಂದಿಗೆ ದರ್ಪದೊಂದಿಗೆ ವರ್ತಿಸುವುದು ಕಂಡು ಬರುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ನೀವು ಪೊಲೀಸ್ ಹಾಗೂ ನಾಗರಿಕ ಕರ್ತವ್ಯಗಳನ್ನು ನಿರ್ವಹಿಸಬೇಕು. ಈ ನೆಲದ ಜನರ, ಮಣ್ಣಿನ ಸ್ವಾಭಿಮಾನದ ರಕ್ಷಣೆ ಕೆಲಸ ನಿಮ್ಮದಾಗಿದೆ. ರೈತರು, ಮಹಿಳೆಯರು, ಮಕ್ಕಳ ರಕ್ಷಣೆ ನಿಮ್ಮ ಆದ್ಯ ಕರ್ತವ್ಯವಾಗಬೇಕು.
ಎಲ್ಲಾ ಮಾನವರು ಸರಿಸಮಾನರು, ಪೊಲೀಸ್ ಕೆಲಸಕ್ಕೆ ಉತ್ತವಾದವರು ಮಾತ್ರ ಆಯ್ಕೆಯಾಗುತ್ತಾರೆ. ಖಾಕಿವಸ್ತ್ರ ನಿಮ್ಮ ಗುರುತು, ಈ ಖಾಕಿವಸ್ತ್ರದ ಮಾನ ತೆಗೆಯುವ ಕೆಲಸ ಮಾಡಬೇಡಿ. ಇಂದು ನೀವು ನಡೆಸುವ ನಿರ್ಗಮನ ಪಥ ಸಂಚಲನ ವೀಕ್ಷಣೆಗೆ ನಿಮ್ಮ ಕುಟುಂಬ ವರ್ಗವದವರು ಆಗಮಿಸಿದ್ದಾರೆ. ನಿಮ್ಮನ್ನು ಹೆತ್ತು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಲು ಕಳುಹಿಸಿದ ನಿಮ್ಮ ತಂದೆ ತಾಯಿಗಳಿಗೆ ಇಲಾಖೆ ವತಿಯಿಂದ ಧನ್ಯವಾಧಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ತರಬೇತಿ ಶಾಲೆಯ ವಾರ್ಷಿಕ ವರದಿ ವಾಚನ ಮಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಹಾಗೂ ತರಬೇತಿ ಶಾಲೆಯ ಪ್ರಾಂಶುಪಾಲರಾದ ಬಿ.ಎಸ್.ನೇಮಗೌಡ ಮಾತನಾಡಿ ಪ್ರಶಿಕ್ಷಣಾರ್ಥಿಗಳಿಗೆ ಹೊರಾಂಗಣ ಹಾಗೂ ಒಳಾಂಗಣ ತರಬೇತಿಗಳನ್ನು ಉತ್ತಮವಾಗಿ ನೀಡಲಾಗಿದೆ.
ಐಪಿಸಿ, ಸಿ.ಆರ್.ಪಿಸಿ. ಪೊಲೀಸ್ ಮ್ಯಾನ್ಯೂಯಲ್ಗಳು, ಮನಃಶಾಸ್ತ, ಅಪರಾಧ ಶಾಸ್ತ, ಬೆರಳಚ್ಚು ತಂತ್ರಜ್ಞಾನ, ಸೈಬರ್ ಕ್ರೈಮ್, ಭಾರತದ ಸಂವಿಧಾನ ಕುರಿತು ವಿಷಯಗಳನ್ನು ಬೋಧಿಸಲಾಗಿದೆ. ಗುಂಡುಗುರಿ ತರಬೇತಿ ನೀಡಲಾಗಿದೆ. ಬಂದೋಬಸ್ತ್ ಕೆಲಸಕ್ಕೆ ಪ್ರಶಿಕ್ಷಣಾರ್ಥಿಗಳನ್ನು ನೇಮಿಸಿ ಪ್ರಾಯೋಗಿಕ ತರಬೇತಿಯನ್ನು ಸಹ ನೀಡಲಾಗಿದೆ. ಒಟ್ಟು ೧೨೩ ಪ್ರಶಿಕ್ಷಣಾರ್ಥಿಗಳು ೫ನೇ ಕೆಎಸ್ಐಎಫ್ ಪೊಲೀಸ್ ಕಾನ್ಸ್ಟೇಬಲ್ಗಳ ತಂಡದಲ್ಲಿ ಇದ್ದು, ಇದರಲ್ಲಿ ೧೫ ಜನ ಸ್ನಾತಕೊತ್ತರ ಪದವಿಧರರು, ೨೨ ಬಿಎಡ್, ಹಾಗೂ ೫೫ ವಿವಿಧ ಪದವಿಗಳನ್ನು ಪಡೆದವರು, ೧೫ ಪಿಯುಸಿ ವಿಧ್ಯಾರ್ಹತೆ ಹೊಂದಿದವರು ಇದ್ದಾರೆ ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ನಾಗರಾಜ್ ಎಂ ಎನ್ ಅವರು ಸ್ವಾಗತಿಸಿದರು. ಕಾನೂನು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ರವೀಂದ್ರ ಕೆ ಗಡಾದಿ ವಂದಿಸಿದರು.
ಫೈರಿಂಗ್ ವಿಭಾಗದಲ್ಲಿ ಕುಮಾರ್, ಕರಿಯಪ್ಪ, ಗೌತಮ್, ನಾಗಪ್ಪ, ಹೊರಾಂಗಣದಲ್ಲಿ ಸುಹಾಸ್,ಎಸ್.ಆರ್, ನಿಂಗಪ್ಪ ಹಲ್ಲಾಪುರ, ದೇವರಾಜ್ ಮೇತ್ರಿ, ಪ್ರವೀಣ್ ಆಚಾರ್ರಟ್ಟಿ, ಒಳಾಂಗಾಣದಲ್ಲಿ ಪ್ರಕಾಶ್, ದೇವರಾಜ್ ಮೇತ್ರಿ, ಚಂದ್ರಶೇಖರ್, ಸರ್ವೋತ್ತಮನಾಗಿ ಸುಹಾಸ್ ಎಸ್.ಆರ್. ಪ್ರಶಸ್ತಿಗಳನ್ನು ಪಡೆದರು. ಪ್ರಶಿಕ್ಷಣಾರ್ಥಿಗಳು ತ್ವರಿತ ಹಾಗೂ ಮಂದಗತಿಯ ಪೆರೇಡ್ ನಡೆಸಿದರು.
ಐ.ಎಸ್.ಡಿ.ಎಸ್ನ ಎಸ್ಪಿ ರವಿಕುಮಾರ್, ಮಾಜಿ ಎಂ.ಪಿ. ಐ.ಜಿ.ಸನದಿ, ಸೇರಿದಂತೆ ಕರ್ತವ್ಯ ಹಾಗೂ ನಿವೃತ್ತರಾದ ಹಿರಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.