ರಾಜ್ಯ

ಹಿರಿಯ ಪತ್ರಕರ್ತ ವೈ.ಎನ್. ಜೋಶಿ ನಿಧನ

ಹುಬ್ಬಳ್ಳಿ: ಹಿರಿಯ ಪತ್ರಕರ್ತ, ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ವೈ.ಎನ್. ಜೋಶಿ (86) ಅವರು ನಿಧನ ಹೊಂದಿದರು.

ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರಿಗೆ ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ ೬.೪೫ ಕ್ಕೆ ಕೊನೆಯುಸಿರೆಳೆದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ‌.

ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿನ ತಮ್ಮ “ಬೇವು ಬೆಲ್ಲ” ಅಂಕಣದಿಂದಾಗಿ ನಾಡಿನ ಮನೆ ಮಾತಾಗಿದ್ದರು. ಕೃಷಿಗೆ ಸಂಬಂಧಿದಂತೆ ಹಲವಾರು ಲೇಖನಗಳನ್ನು ಬರೆದಿದ್ದ ಅವರು ಕರಾರುವಕ್ಕಾಗಿ ಚುನಾವಣೆ ಸಮೀಕ್ಷೆ ಬರೆಯುವುದರಲ್ಲಿ ನಿಸ್ಸೀಮರಾಗಿದ್ದರು.

ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಅವರ ಪತ್ರಿಕೋದ್ಯಮ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗುರುತಿಸಿತ್ತು. ಇತ್ತೀಚೆಗೆ ಅವರಿಗೆ ಹಿರಿಯ ಪತ್ರಕರ್ತರಿಗೆ ನೀಡುವ ಮಾಸಾಶನವನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿತ್ತು.

ಮೃತರು ಇಬ್ಬರು ಪುತ್ರರು, ಒಬ್ಬ ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ ವೈ.ಎನ್.ಜೋಷಿ ನಿಧನಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಪತ್ರಿಕಾವೃತ್ತಿಯಲ್ಲಿ ವೃತ್ತಿಧರ್ಮಕ್ಕೆ ಅತ್ಯಂತ ಪ್ರಾಮುಖ್ಯ ನೀಡುತ್ತಿದ್ದ ಅವರು ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *