ಜಿಲ್ಲೆ

ಕೋಮುಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮ : ಎಸ್ ಪಿ. ವರ್ತಿಕಾ ಕಟಿಯಾರ್

ಧಾರವಾಡ prajakiran.com : ಸಾಮಾಜಿಕ ಜಾಲತಾಣಗಳಾದ ವಾಟ್ಸ್ಪ್, ಫೇಸ್‌ಬುಕ್, ಟೆಲಿಗ್ರಾಮ್, ಧ್ವನಿ ಮೆಸೇಜ್ ಮುಂತಾದವುಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡಿ ಕೋಮುಸಾಮರಸ್ಯಕ್ಕೆ ಧಕ್ಕೆ ತರುವವರ ವಿರುದ್ಧ ಐಪಿಸಿ ಸೆಕ್ಷನ್ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹೇಳಿದರು.

ಅವರು ಬುಧವಾರ ಮಧ್ಯಾಹ್ನ ಧಾರವಾಡ ಪೊಲೀಸ್ ಹೆಡ್ ಕ್ವಾರ್ಟರ್ಸ್ದಲ್ಲಿರುವ ದುರ್ಗಾದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಜರುಗಿದ ಜಿಲ್ಲೆಯ ವಿವಿಧ ತಾಲೂಕಿನ ಧಾರ್ಮಿಕ ಮುಖಂಡರ, ಧಾರ್ಮಿಕ ಸಂಸ್ಥೆಗಳ ಪ್ರಮುಖರೊಂದಿಗೆ ಶಾಂತಿ ಪಾಲನೆ ಹಾಗೂ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ,ಮಾತನಾಡಿದರು.

ಕೆಲವು ಜನರು ಸಮಾಜದಲ್ಲಿ ಶಾಂತಿಭAಗ ಉಂಟುಮಾಡುವಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸುವ,ಫಾರ್ವರ್ಡ್ ಮಾಡುವ ಕೃತ್ಯ ಮಾಡುತ್ತಿದ್ದಾರೆ. ಇಂತವರ ಬಗ್ಗೆ ಯಾವುದೇ ದೂರು ಬಂದಲ್ಲಿ ಅಥವಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಲ್ಲಿ ಎನ್ ಡಿ ಆರ್ ಎಫ್ ಕಾಯ್ದೆ ಹಾಗೂ ಐಪಿಸಿ ೧೮೮ ಮತ್ತು ೨೯೫ ಪ್ರಕಾರ ಕ್ರಮಿನಲ್ ಪ್ರಕರಣ ದಾಖಲಿಸಿ,ಜೈಲಿಗೆ ಕಳುಹಿಸುವುದಾಗಿ ಅವರು ಸಭೆಯಲ್ಲಿ ಎಚ್ಚರಿಕೆ ನೀಡಿದರು.

ಪ್ರತಿ ಗ್ರಾಮದ ಬೀಟ್ ಹಂತದಿಂದ ಜಿಲ್ಲಾ ಮಟ್ಟದವರೆಗೆ ಬೀಟ್ ಸದಸ್ಯರ, ಧಾರ್ಮಿಕ ಹಾಗೂ ಗ್ರಾಮದ ಪ್ರಮುಖರ, ಸ್ಥಳೀಯ ಜನಪ್ರತಿನಿಧಿಗಳ ಸಭೆ ಜರುಗಿಸಿ ಸರ್ಕಾರದ ನಿರ್ದೇಶನಗಳನ್ನು ಮತ್ತು ಕೊರೊನಾ ವೈರಸ್ ಹರಡುವ ಗಂಭೀರತೆಯನ್ನು ಮನವರಿಕೆ ಮಾಡಲಾಗಿದೆ.

ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಗ್ರಾಮಗಳ ಪ್ರತಿ ಓಣಿ, ಮನೆಗಳಿಗೆ ಸ್ವತಃ ತೆರಳಿ ಮನೆಯಿಂದ ಅಗತ್ಯವಾಗಿ ಹೊರ ಬರದಂತೆ, ರಸ್ತೆಗೆ ಇಳಿಯದಂತೆ ತಿಳುವಳಿಕೆ ನೀಡುತ್ತಿದ್ದಾರೆ.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸದೆ ,ಕರ್ತವ್ಯನಿರತ ಅಧಿಕಾರಿಗಳಿಗೆ ಸ್ಪಂದಿಸದಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ ಪಿ. ವರ್ತಿಕಾ ಕಟಿಯಾರ್ ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ,ಜಿಲ್ಲೆಯ ಸಾರ್ವಜನಿಕರ ಸುರಕ್ಷತೆಗಾಗಿ ಹಾಗೂ ಅಗತ್ಯ ಸೇವೆಗಳಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಸಾರ್ವಜನಿಕರು ಸಹಕಾರ ನೀಡಬೇಕು.

ಅನಗತ್ಯ ಓಡಾಟ ಮಾಡಬಾರದು. ಪಡಿತರ ವಿತರಣೆ ಆರಂಭವಾಗಿದೆ. ಕಾಯಿಪಲ್ಯ ಸೇರಿದಂತೆ ಎಲ್ಲ ತರಕಾರಿ. ಹಣ್ಣು ಹಂಪಲ ತಮ್ಮ ಮನೆಯ ಬಾಗಿಲಿಗೆ ಬರುವಂತೆ ಜಿಲ್ಲಾಡಳಿತ ದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಕೃಷಿ ಚಟುವಟಿಕೆ ಮೇವು ಪೂರೈಕೆ ಸೇರಿದಂತೆ ಯಾವುದೇ ಕೃಷಿ ಪೂರಕ ಕಾರ್ಯಗಳಿಗೆ ತಡೆ ಇಲ್ಲ ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಎಲ್ಲ ಧರ್ಮಗಳ ಹಬ್ಬಗಳು ಪ್ರತಿ ವರ್ಷ ಬರುತ್ತವೆ .ಈಗ ಲಾಕ್ ಡೌನ್ ನಿಷೇಧಾಜ್ಞೆ ಇರುವುದರಿಂದ ಮತ್ತು ಕೋವಿಡ್ ೧೯ ವೈರಸ್ ಹರಡದಂತೆ ಕ್ರಮಕೈಗೊಂಡಿರುವುದರಿಂದ ಗುಂಪು ಸೇರಿ ಯಾವುದೇ ಹಬ್ಬಗಳ ಆಚರಣೆ ಬೇಡ.

ಇದೊಂದು ಸಲ ತಮ್ಮ ಮನೆಯೊಳಗೆ ಇದ್ದು, ಮನೆಯಲ್ಲಿಯೇ ಹಬ್ಬ ಆಚರಿಸಿ,ಈ ಕೊರೊನಾ ವಿಷ ಗಳಿಗೆ, ಅವಧಿ ಮುಗಿದ ಮೇಲೆ ಮತ್ತು ಸರ್ವರೂ ಸೇರಿ ಶಾಂತಿ, ಕೋಮು ಸೌರ್ಹಾದತೆ , ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಿಸೋಣ ಎಂದು ವಿನಂತಿಸಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ,ಸಾರ್ವಜನಿಕರ ಸಹಕಾರದಿಂದ ಸಾಕಷ್ಟು ಸಾಧಿಸಿದ್ದೇವೆ.

ಪ್ರತಿಯೊಬ್ಬರ ರಕ್ಷಣೆಗಾಗಿ ಸರಕಾರ ಕೈಗೊಂಡಿರುವ ಕ್ರಮಗಳನ್ನು ಬೆಂಬಲಿಸಿ, ಪಾಲಿಸಬೇಕು. ಪರಸ್ಪರ ಹಂಚಿಕೊಳ್ಳದಂತೆ ತಮ್ಮ ಆಪ್ತರಿಗೆ, ಕುಟುಂಬದವರಿಗೆ ,ಸ್ನೇಹಿತರಿಗೆ ತಿಳುವಳಿಕೆ ನೀಡಬೇಕು.ಇಲ್ಲದಿದ್ದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮುಗದ ಗ್ರಾಮದ ಎಸ್.ಎಸ್.ಪೀರಜಾದೆ, ಕುಂದಗೋಳದ ಮಲ್ಲಿಕಾರ್ಜುನ ಕಿರೇಸೂರ ರಾಜೇಸಾಬ ಕಳ್ಳಿಮನಿ, ಅಣ್ಣಿಗೇರಿಯ ಎಚ್.ಎಚ್ ಗುಡನಾಯಕ್, ನವಲಗುಂದದ ಅಬ್ಬಾಸ ದೇವರಿಡು, ಬ್ಯಾಹಟ್ಟಿಯ ಮಂಜುನಾಥ ಮಲ್ಹಾರಿ, ಹಸನಸಾಬ ತಡಸದ, ಉಪ್ಪಿನ ಬೆಟಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾವೀರ ಅಷ್ಟಗಿ ಮಾತನಾಡಿ ,ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ನೀಡುವ ಮಾರ್ಗದರ್ಶನವನ್ನು ಪಾಲಿಸುವದಾಗಿ ಮತ್ತು ಮಸೀದಿ,ಜಮಾತ್, ದೇವಸ್ಥಾನ,ಸಮುದಾಯಗಳ ಸದಸ್ಯರಿಗೆ ಜಾಗೃತಿ ಮೂಡಿಸುವದಾಗಿ ತಿಳಿಸಿದರು.

ಕಲಘಟಗಿ ಸಿಪಿಐ ವಿಜಯ ಬಿರಾದಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಧಾರವಾಡ ಗ್ರಾಮೀಣ ಸಿಪಿಐ ಎಸ್.ಸಿ ಪಾಟೀಲ್ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಲ್ ಇನ್ಸ್ಪೆಕ್ಟರುಗಳು ಹಾಗೂ ಗ್ರಾಮೀಣ ಪಿಎಸ್‌ಐ ಮಹೇಂದ್ರ ನಾಯಕ ಸೇರಿದಂತೆ ಎಲ್ಲ ಪಿಎಸ್‌ಐಗಳು ,ಪೊಲೀಸ್ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *