ಬೆಂಗಳೂರು : ಮೊದಲ ಪತ್ನಿ ನಾಗರತ್ನ ನಡೆಯಿಂದ ಮುನಿಸಿಕೊಂಡಿರುವ ನಟ ದುನಿಯಾ ವಿಜಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಸೋಮವಾರ ವಿಚ್ಛೇದನ
ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇತ್ತಿಚೆಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾಗ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ನಾಗರತ್ನ ಮನಬಂದಂತೆ
ಹಲ್ಲೆ ಮಾಡಿದ್ದರು.
ಅಲ್ಲದೆ, ಈ ಸಂಬಂಧ ಮಕ್ಕಳನ್ನು ಅವರ ವಿರುದ್ದ ಎತ್ತಿಕಟ್ಟಿ ದಾರಿತಪ್ಪಿಸಿದ್ದರು. ಹೀಗಾಗಿ ಮನನೊಂದ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಇಬ್ಬರು ಪ್ರತ್ಯೇಕವಾಗಿಯೇ ವಾಸವಾಗಿರುವುದರಿಂದ ವಿಚ್ಛೇದನ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ನಟ ದುನಿಯಾ ವಿಜಯ ಮನವಿ ಮಾಡಿದ್ದಾರೆ.
ಈ ಹಿಂದೆ ಸಹ ವಿಜಿ ಮೊದಲ ಪತ್ನಿ ನಾಗರತ್ನ ವಿರುದ್ದ ಮುನಿಸಿಕೊಂಡು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ರಾಜಿ ಸಂಧಾನ ಮಾಡಿಕೊಂಡು ಎರಡನೇ ಮದುವೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.