ರಾಜ್ಯ

ಹಲವರಿಗೆ ಕೈ ತಪ್ಪಿದ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ : ಮುನಿಸಿಕೊಂಡ ಸಚಿವರು

ಬೆಂಗಳೂರು prajakiran.com : ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ಸೋಂಕು ನಿವಾರಣೆಗೆ ಜಿಲ್ಲೆಗಳಲ್ಲಿಯೇ ಇದ್ದು ಜಿಲ್ಲಾಡಳಿತದೊಂದಿಗೆ ಕಾರ್ಯ ನಿರ್ವಹಣೆ ಮಾಡುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇಮಕ ಮಾಡಿದ್ದಾರೆ.

ಆದರೆ ನೇಮಕದ ಬೆನ್ನಲ್ಲೇ ಅನೇಕ ಸಚಿವರು ತಮ್ಮಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಇನ್ನೂ ಹಲವು ಸಚಿವರಿಗೆ ಎರಡೆರೆಡು ಜಿಲ್ಲೆಗಳ ಹೊಣೆ ನೀಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲಾಉಸ್ತುವಾರಿ ಸಚಿವ ಸ್ಥಾನ ಮೇಲೆ ಕಣ್ಣಿಟ್ಟಿದ್ದ ರಮೇಶ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲೆ ಕೈ ತಪ್ಪಿದ್ದು, ಈ ಹಿಂದಿನ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮುಂದುವರೆಸಲಾಗಿದೆ.

ಬೆಂಗಳೂರು ನಗರದ ಉಸ್ತುವಾರಿಯನ್ನು ಸಿಎಂ ಯಡಿಯೂರಪ್ಪ ಅವರೇ ವಹಿಸಿಕೊಂಡಿದ್ದು, ಕೆಲ ಸಚಿವರಿಗೆ ಹಿಂದೆ ಇದ್ದಂತೆ ಎರಡು ಜಿಲ್ಲೆಗಳ ಉಸ್ತುವಾರಿ ಮುಂದುವರಿಸಿರುವುದು ಅನೇಕರಅಸಮಾಧಾನಕ್ಕೆ ಕಾರಣವಾಗಿದೆ. ಕೆಲವರನ್ನು ಬದಲಿಸಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.

ಡಿಸಿಎಂ ಗೋವಿಂದ ಕಾರಜೋಳಅವರಿಗೆ ಬಾಗಲಕೋಟೆ ಹಾಗೂ ಕಲಬುರಗಿ, ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿ ಹಾಗೂ ಧಾರವಾಡ, ಕಾನೂನು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ತುಮಕೂರು ಹಾಗೂ ಹಾಸನ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ ಹಾಗೂ ಉಡುಪಿ ಪ್ರಭು ಚವ್ಹಾಣ ಅವರಿಗೆ ಬೀದರ ಹಾಗೂ ಯಾದಗಿರಿ ಜಿಲ್ಲೆಯನ್ನು ಮುಂದುವರೆಸಲಾಗಿದೆ.

ಮಂಡ್ಯ ಜಿಲ್ಲೆ ಉಸ್ತುವಾರಿಯನ್ನು ಆರ್. ಅಶೋಕ್ ಬದಲಿಗೆ ನಾರಾಯಣಗೌಡ ಅವರಿಗೆ ನೀಡಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಹೊಂದಿದ್ದ ವಿ ಸೋಮಣ್ಣ ಅವರನ್ನು ಕೇವಲ ಕೊಡಗಿಗೆ ಸೀಮಿತ ಮಾಡಿ ಎಸ್.ಟಿ.ಸೋಮಶೇಖರ್ ಅವರಿಗೆ ಮೈಸೂರಿನ ಹೊಣೆ ವಹಿಸಲಾಗಿದೆ.

ಶಶಿಕಲಾ ಜೊಲ್ಲೆ ಅವರನ್ನು ಉತ್ತರ ಕನ್ನಡದಿಂದ ಕೈ ಬಿಟ್ಟು ಅವರಿಗೆ ವಿಜಯಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ಜಿಲ್ಲೆಯವರೆ ಆದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಗೆ ನೀಡಲಾಗಿದೆ.

ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹಾಗೂ ಡಾ. ಕೆ. ಸುಧಾಕರ್ ನಡುವೆ ರಾಮನಗರ ಜಿಲ್ಲಾ ಉಸ್ತುವಾರಿಗೆ ನಡೆದಿದ್ದ ಜಿದ್ದಾಜಿದ್ದಿಗೆ ಕೊನೆಗಾಣಿಸಲಾಗಿದ್ದು, ಇನ್ನೊಬ್ಬ ಡಿಸಿಎಂ ಲಕ್ಷ್ಮಣ ಸವದಿ ಹಿಡಿತದಲ್ಲಿದ್ದ ಬಳ್ಳಾರಿಯ ಉಸ್ತುವಾರಿಯನ್ನು ಹೊಸಪೇಟೆಯ ಆನಂದಸಿಂಗ್ ಅವರಿಗೆ ನೀಡಲಾಗಿದೆ.

ಡಿಸಿಎಂ ಲಕ್ಷ್ಮಣ ಅವರಿಗೆ ರಾಯಚೂರು ಜಿಲ್ಲೆಯ ಹೊಣೆ ಹೋರಿಸಲಾಗಿದೆ. ಅಂದ ಹಾಗೆ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾದವರ ಪೈಕಿ ರಮೇಶ್ ಜಾರಕಿಹೊಳಿ, ಗೋಪಾಲಯ್ಯ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಸಿಕ್ಕಿಲ್ಲ.

ಕರೋನಾ ಮಹಾಮಾರಿಯ ಸಂಕಷ್ಟ ಮುಗಿದ ನಂತರ ಮತ್ತೋಮ್ಮೆ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಿಎಂ ಬದಲಾಯಿಸುವುದಾಗಿ ಸಮಜಾಯಿಸಿ ನೀಡಿದ್ದು, ಸದ್ಯಕ್ಕೆ ಎಲ್ಲರೂ ಒಂದಾಗಿ ಕರೋನಾ ವಿರುದ್ದ ಸಂಘಟಿತ ಹೋರಾಟ ನಡೆಸುವಂತೆ ಕರೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಪಟ್ಟಿ ಇಲ್ಲಿದೆ.

ಬಿ.ಎಸ್.ಯಡಿಯೂರಪ್ಪ-ಬೆಂಗಳೂರು

ಡಾ.ಸಿ.ಎನ್.ಅಶ್ವತ್ಥನಾರಾಯಣ- ರಾಮನಗರ

ಲಕ್ಷ್ಮಣ ಸವದಿ- ರಾಯಚೂರು

ಗೋವಿಂದ ಕಾರಜೋಳ-ಬಾಗಲಕೋಟೆ, ಕಲಬುರಗಿ

ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ

ಆರ್.ಅಶೋಕ್- ಬೆಂಗಳೂರು ಗ್ರಾಮಾಂತರ

ಜಗದೀಶ ಶೆಟ್ಟರ್- ಬೆಳಗಾವಿ, ಧಾರವಾಡ

ಬಿ.ಶ್ರೀರಾಮುಲು- ಚಿತ್ರದುರ್ಗ

ಎಸ್. ಸುರೇಶ್‌ಕುಮಾರ್- ಚಾಮರಾಜನಗರ

ವಿ.ಸೋಮಣ್ಣ- ಕೊಡಗು

ಸಿ.ಟಿ.ರವಿ- ಚಿಕ್ಕಮಗಳೂರು

ಬಸವರಾಜ ಬೊಮ್ಮಾಯಿ- ಹಾವೇರಿ, ಉಡುಪಿ

ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ

ಜೆ.ಸಿ. ಮಾಧುಸ್ವಾಮಿ- ತುಮಕೂರು, ಹಾಸನ

ಸಿ.ಸಿ. ಪಾಟೀಲ್-ಗದಗ

ಎಸ್. ನಾಗೇಶ್- ಕೋಲಾರ

ಪ್ರಭು ಚವ್ಹಾಣ್- ಬೀದರ್, ಯಾದಗಿರಿ

ಶಶಿಕಲಾ ಜೊಲ್ಲೆ- ವಿಜಯಪುರ

ಶಿವರಾಮ ಹೆಬ್ಬಾರ್- ಉತ್ತರ ಕನ್ನಡ

ಎಸ್.ಟಿ. ಸೋಮಶೇಖರ್- ಮೈಸೂರು

ಡಾ. ಕೆ. ಸುಧಾಕರ್- ಚಿಕ್ಕಬಳ್ಳಾಪುರ

ಕೆ.ಸಿ. ನಾರಾಯಣಗೌಡ- ಮಂಡ್ಯ

ಆನಂದಸಿಂಗ್- ಬಳ್ಳಾರಿ

ಬಿ.ಎ. ಬಸವರಾಜು- ದಾವಣಗೆರೆ

ಬಿ.ಸಿ. ಪಾಟೀಲ್- ಕೊಪ್ಪಳ

Please follow and like us:

Leave a Reply

Your email address will not be published. Required fields are marked *