ಪಶುಪತಿಹಾಳ : ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ನಿಜಗುಣ ಶಿವಯೋಗಿಗಳ ಕೈವಲ್ಯ ಜ್ಞಾನ ಪದ್ಧತಿಯ ಬ್ರಹ್ಮ ಜಿಜ್ಞಾಸೆ ಹಾಗೂ ಅಖಂಡ ಶಿವನಾಮ ಸಪ್ತಾಹದ ಸಮಾರೋಪದ ಅಂಗವಾಗಿ ಶುಕ್ರವಾರ ಗೌರಿಹುಣ್ಣಿಮೆಯಂದು ಸಾಮೂಹಿಕ ವಿವಾಹಗಳು ಹಾಗೂ ತಾತ್ವಿಕ ತೇರಿನ ಉತ್ಸವ ಸಡಗರ,ಸಂಭ್ರಮಗಳಿಂದ ಜರುಗಿದವು.
ಹುಬ್ಬಳ್ಳಿ ನಾಸಿಕ ಶರಣಪ್ಪನ ಮಠದ ವಾಸುದೇವಾನಂದ ಶ್ರೀಗಳು,ಬಾಗಲಕೋಟ ಜಿಲ್ಲೆ ಅರಕೇರಿಯ ಮಾಧವಾನಂದ ಸ್ವಾಮಿಗಳು ಸೇರಿದಂತೆ ಆರೂಢ ಅವಧೂತ ಪರಂಪರೆಯ ಅನೇಕ ಸಾಧು ಸಂತರ ಮಾರ್ಗದರ್ಶನದಲ್ಲಿ ಸತತ ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆದವು.
ಸಪ್ತಾಹದ ಅವಧಿಯಲ್ಲಿ ನಿರಂತರವಾಗಿ ಏಕತಾರಿಯೊಂದಿಗೆ ” ಶಿವಾಯನಮಃ ಓಂ” ಎಂಬ ತಾರಕ ಮಂತ್ರವನ್ನು ನಿರಂತರವಾಗಿ ಸ್ಮರಿಸಲಾಗುತ್ತದೆ.ಗ್ರಾಮದ ಯುವಕರು,ಮಹಿಳೆಯರು,ಹಿರಿಯರು ಸರದಿಯ ಮೇಲೆ ಕಾರ್ಯ ನಿರ್ವಹಿಸುತ್ತಾರೆ.ಏಳು ದಿನಗಳ ಕಾಲ ನಿರಂತರವಾಗಿ ಅನ್ನ ಸಂತರ್ಪಣೆ,ದಾಸೋಹ ನಡೆದವು.
ಶುಕ್ರವಾರ ಸಂಜೆ ಶ್ರೀ ಸಿದ್ಧಾರೂಢರ ಹಠಯೋಗದ ಸಂದೇಶಗಳನ್ನು ಸಾರುವ ತಾತ್ವಿಕ ತೇರನ್ನು ಭಕ್ತಿ ಭಾವಗಳೊಂದಿಗೆ ಗ್ರಾಮದಲ್ಲಿ ಎಳೆಯಲಾಯಿತು. ಕಳಶದ ಸ್ಥಾನದಲ್ಲಿ ಗಂಢಬೇರುಂಡ ಹಕ್ಕಿಯ ಲಾಂಛನ ಹಾಗೂ ಯೋಗದ ಹಂತಗಳನ್ನು ತೇರಿನಲ್ಲಿ ಅಳವಡಿಸಿರುವದು ಇಲ್ಲಿನ ವಿಶಿಷ್ಟತೆಯಾಗಿದೆ.ಗ್ರಾಮದ ಸಿದ್ಧಾರೂಢರ ಮಠದಿಂದ ಆರಂಭವಾದ ತೇರು ಚೌಡಮ್ಮ,ಹೊನ್ನತ್ತೆಮ್ಮ ಗುಡಿಗಳ ಮಾರ್ಗದಲ್ಲಿ ಹಾಯ್ದು ಬಸವೇಶ್ವರ ದೇವಸ್ಥಾನಕ್ಕೆ ತಲುಪಿ , ಮರಳಿ ಸಿದ್ಧಾರೂಢ ಮಠಕ್ಕೆ ತರಲಾಯಿತು. ಶ್ರೀ ಸಿದ್ಧಾರೂಢರು ಹಾಗೂ ಶ್ರೀ ಗುರುನಾಥರೂಢರ ಪಂಚಲೋಹದ ಉತ್ಸವ ಮೂರ್ತಿಗಳನ್ನು ತೇರಿನಲ್ಲಿ ಇರಿಸಲಾಗಿತ್ತು.
ಹುಬ್ಬಳ್ಳಿ ಗೋಪನಕೊಪ್ಪದ ದಾಲಪಟ ಗೊಂಬೆ ಕುಣಿತ, ಸುಳ್ಳದ ಮಹಿಳಾ ಡೊಳ್ಳು ಕುಣಿತ, ಪಶುಪತಿಹಾಳದ ಜಗ್ಗಲಿಗೆ ಮೇಳ ಮತ್ತಿತರ ಜನಪದ ಕಲಾತಂಡಗಳು ,ಮಹಿಳಾ ಕುಂಭಮೇಳಗಳು ತೇರಿನ ಉತ್ಸವದ ಉದ್ದಕ್ಕೂ ಸಾಗಿ ಮೆರವಣಿಗೆಯನ್ನು ಆಕರ್ಷಕಗೊಳಿಸಿದವು. ಗೌರಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸಂಪ್ರದಾಯ ಪದಗಳೊಂದಿಗೆ ಗ್ರಾಮದ ಮಹಿಳೆಯರು ಸಕ್ಕರೆ ಆರತಿ ಬೆಳಗಿದರು.