ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಬೈಕ್, ಕಾರು ಮತ್ತು ಟೆಂಪೋ ಟ್ರಾವೆಲ್ಸ್ ನಡುವೆ ಸರಣಿ ಅಪಘಾತ ನಡೆದಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಮಂಡ್ಯದ ಸಿದ್ದಯ್ಯನ ಕೊಪ್ಪಲು ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಈ ಅಪಘಾತದಿಂದ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಮಾದೇಶ್(45), ಜೇಮ್ಸ್(30) ಎಂದು ಗುರುತಿಸಲಾಗಿದೆ.
ಗಾರೆ ಕೆಲಸಕ್ಕೆ ಬೈಕ್ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದ ಪರಿಣಾಮ ಈ ಇಬ್ಬರು ಸಾವನ್ನಪ್ಪಿದ್ದಾರೆ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಡ್ಯ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಪಘಾತದಿಂದ ಬೆಂಗಳೂರು- ಮೈಸೂರು ಹೆದ್ದಾರಿ ಸುಮಾರು 5 ಕಿಲೋಮೀಟರ್ ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದಾಗಿ ಕೆಲ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು.