ಬೆಂಗಳೂರು Prajakiran.com : ನವದೆಹಲಿಯ ಜಾಮೀಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ ರಾಮಭಕ್ತ ಗೋಪಾಲ್ ನಡೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ಗಾಂಧಿಯ ಹತ್ಯೆಯ ಈ ಕರಾಳ ದಿನದಂದೇ ಗೋಡ್ಸೆಯ ಸಂತತಿಗಳು ಹೆಚ್ಚುತ್ತಿವೆ. ಅದರಲ್ಲೂ ಪೊಲೀಸರ ಸಮ್ಮುಖದಲ್ಲೇ ನಡೆಯುತ್ತಿರುವ ಇಂತಹ ಅಪಾಯಕಾರಿ ಸಂಗತಿ ಎಂದು ಕಿಡಿಕಾರಿದೆ.
ಅಲ್ಲದೆ, ಇದು ಸಮಾಜದ ಮೇಲಿನ ಭರವಸೆಯನ್ನು ಹಾಳು ಮಾಡುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವ ಗೃಹ ಸಚಿವ ಅಮಿತ್ ಶಾ @AmitShah
ಅವರು ಕೂಡಲೇ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಆಗ್ರಹಿಸಿದೆ.
ಇದೇ ವೇಳೆ ಇಂದಿನ ದೇಶದ ಸ್ಥಿತಿ, ಜಲಿಯನ್ ವಾಲಾಬಾಗ್ ನಲ್ಲಿ ಜನರಲ್ ಡಯಾರ್ ನೂರಾರು ಜನರನ್ನು ಕೊಂದ ದಿನಗಳನ್ನು ನೆನಪಿಸುತ್ತಿದೆ.
ಇದನ್ನು ಮುಂದುವರೆಯಲು ಬಿಟ್ಟರೆ ಜಾತಿ-ಧರ್ಮದ ಹೆಸರಲ್ಲಿ ದೇಶ ವಿಭಜನೆ ನಿಶ್ಚಿತ. ಹಾಗಾಗದಂತೆ ಕಾಂಗ್ರೆಸ್ ತಡೆಯಬೇಕು.
ಗಾಂಧಿಜೀ ಅವರ ಕನಸಿನ ಭಾರತವನ್ನು ನಾವು ಉಳಿಸಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಗಾಂಧಿಜೀ ಅವರು ದೇಶದಲ್ಲಿ ಜಾತಿ-ಧರ್ಮದ ಹೆಸರಲ್ಲಿ ಸಾಮರಸ್ಯ ಕದಡಿದಾಗ ಅಂತಹ ಸ್ಥಳಗಳಿಗೆ ನೇರವಾಗಿ ಭೇಟಿಯಾಗಿ ಅಲ್ಲಿ ಸಾಮರಸ್ಯ ಬೆಸೆಯುತ್ತಿದ್ದರು.
ಇಂತಹ ವ್ಯಕ್ತಿಯನ್ನು ಹಿಂದೂ ಮಹಾಸಭಾ ಸಂಚು ಮಾಡಿ ಹತ್ಯೆ ಮಾಡುತ್ತದೆ. 6 ಬಾರಿ ಗಾಂಧಿಜೀ ಅವರ ಹತ್ಯೆ ಗೆ ಸಂಚು ರೂಪಿಸಲಾಗಿತ್ತು. ಇವರು ದೇಶದ್ರೋಹಿಗಳಲ್ಲವೇ? ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮತಾಂಧ ಶಕ್ತಿಗಳು ಗಾಂಧಿಜೀ ಅವರ ವಿಚಾರಗಳನ್ನು ಮೊದಲಿಂದಲೂ ವಿರೋಧಿಸುತ್ತಲೇ ಬಂದಿವೆ. ಅದೇ ಕೋಮುವಾದಿ ಶಕ್ತಿಗಳು ಇಂದೂ ಸಹ ದೇಶವನ್ನು ವಿಭಜಿಸಲು ಯತ್ನಿಸುತ್ತಿವೆ.
ಬಹುತ್ವದ ಆಧಾರದ ಮೇಲೆ ಈ ದೇಶ ರಚನೆ ಆಗಿದೆ. ಸರ್ವ ಶ್ರೇಷ್ಠ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಸಚಿವೆ ರಾಣಿ ಸತೀಶ್, ಗಾಂಧಿಜೀ ಅವರನ್ನು ಹತ್ಯೆಗೈದ ನಾಥೊರಾಮ್ ಗೋಡ್ಸೆಗೆ ಗುಡಿಯನ್ನು ಕಟ್ಟುವಷ್ಟು ಜನರ ಮನಸ್ಸುಗಳನ್ನು ವಿಕೃತಗೊಳಿಸಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಇದಕ್ಕೆ ವಿರುದ್ಧವಾಗಿ ನಾವು ಗಾಂಧಿಜೀ ಅವರ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಬೇಕಿದೆ. ಜಾತ್ಯಾತೀತ, ಸೌಹಾರ್ದ, ಸಹಬಾಳ್ವೆಯ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ರಾಣಿ ಸತೀಶ್ #MahatmaGandhiಅವರನ್ನು ಸ್ಮರಿಸಿದ್ದಾರೆ.