ಮೈಸೂರು prajakiran.com : ರಾಜ್ಯದ ಬಿಜೆಪಿ ಸರಕಾರದಲ್ಲಿ ಸೋತವರಿಗೂ ಕೂಡ ಮಂತ್ರಿ ಸ್ಥಾನ ನೀಡಬೇಕೋ ಬೇಡವೇ ಎಂಬ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ ಮಾಜಿ ಸಚಿವ ಹೆಚ್. ವಿಶ್ವನಾಥ ಈ ಬಗ್ಗೆ ತೀವ್ರ ಬೇಸರ ಹೊರ ಹಾಕಿದ್ದಾರೆ.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಿ ಆಗದಿದ್ದರೆ ನಾವೇನು ಉಳಿಯುವುದಿಲ್ಲವಾ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಆದರೆ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಪ್ರಸಂಗ ನೋಡಿದರೆ ಯಾರಿಗೂ ಗೌರವ ಇಲ್ಲದಂತಾಗಿದೆ ಎಂದು ನೇರವಾಗಿಯೇ ತಮ್ಮಅಸಮಾಧಾನ ಹೊರ ಹಾಕಿದರು.
ನನಗೆ ಈಗಲೂ ವಿಶ್ವಾಸ, ನಂಬಿಕೆ ಇದೆ. ಯಡಿಯೂರಪ್ಪ ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂದಅವರು ಅವರ ಮಾತು ಸದಾ ಉಳಿಯಲಿದೆ ಎಂದರು.
ಸೋತವರಿಗೆ ಮಂತ್ರಿ ಮಾಡಬೇಕು ಎಂಬುದಕ್ಕೆ ಯಾರು ವಿರೋಧಿಸಿಲ್ಲ. ಚಿಕ್ಕಬಳ್ಳಾಪುರ ಬಿಜೆಪಿ ಶಾಸಕ ಡಾ. ಸುಧಾಕರ್ ಹೇಳಿದ್ದಾರೆ ಪಾಪ. ಆದರೆ ಅವರಿಗೆ ಸೇರಿದಂತೆ ಎಲ್ಲರಿಗೂ ಗೊತ್ತಿದೆ. ನಾನು ಬಂದ ಮೇಲೆ ಅದಕ್ಕೆ ಒಂದು ರೂಪ ಬಂದಿದ್ದು ಎಂದರು.
ಸಚಿವ ಸಂಪುಟ ವಿಸ್ತರಣೆ ಆಗಬೇಕು. ರಾಜಕಾರಣದಲ್ಲಿ ಕಾಣುವ ಕೈಗಳಿಗಿಂತ ಕಾಣದ ಕೈಗಳೇ ಹೆಚ್ಚು ಎಂದ ಹೆಚ್. ವಿಶ್ವನಾಥ ನನಗೆ ಪಕ್ಷ ಗೊತ್ತಿಲ್ಲ. ಯಡಿಯೂರಪ್ಪ ಮಾತ್ರ ಗೊತ್ತು ಎಂದು ಸ್ಪಷ್ಟಪಡಿಸಿದರು.
ನೀವು ಯಾರಿಗಾದರೂ ಸಚಿವರನ್ನಾಗಿ ಮಾಡಿ ಆದರೆ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಯಡಿಯೂರಪ್ಪ ಹೇಳಿಕೆ ಕಾಲದ ಧ್ವನಿಯಾಗಬೇಕು. ಯಾರೋ ತಮ್ಮ ವರಿಷ್ಟರ ಧ್ವನಿ ಇಲ್ಲವೇ ಪಕ್ಷದ ಧ್ವನಿ ಅಲ್ಲ ಎಂದರು.
ಅಲ್ಲದೆ, ಯಡಿಯೂರಪ್ಪ ಕೊಟ್ಟ ಮಾತಿಗೆ ಧ್ವನಿ ಆಗಬೇಕು. ಕೊಟ್ಟ ಮಾತಿಗೆ ವಿಚಾರಕ್ಕೆ ಬಂದರೆ ನನಗೆ ನಂಬಿಕೆ ಇದೆ. ಯಡಿಯೂರಪ್ಪಅವರ ಮೇಲೆ ನನಗೆ ಅಪಾರವಾದ ಅಭಿಮಾನವಿದೆ. ಯಾಕೆಂದರೆ ಅವರು ನಾಲಿಗೆ ಮೇಲೆ ನಿಂತ ನಾಯಕ ಎಂದರು.
ಯಡಿಯೂರಪ್ಪ ಅವರು ಕೊಟ್ಟ ಮಾತು ರಾಜಕಾರಣದಲ್ಲಿ ಸದಾ ಕಾಲ ಇರುತ್ತದೆ. ಆ ಮಾತು, ಚರ್ಚೆ, ಸದಾ ಹಸಿರಾಗಿಯೇ ಇರುತ್ತದೆ ಎಂದರು.