ರಾಜ್ಯ

ಕಾಂಗ್ರೆಸ್ ಶಾಸಕರ ಸಭೆಗೆ ಸಿಎಂ ಕುಮಾರಸ್ವಾಮಿಗೆ ಆಹ್ವಾನ !?

ಬೆಂಗಳೂರು : ಕಾಂಗ್ರೆಸ್ ಪಕ್ಷದ ಅನೇಕ ಶಾಸಕರು ಸಮ್ಮೀಶ್ರ ಸರಕಾರದ ವಿರುದ್ದ ಬುಸುಗುಡುತ್ತಿದ್ದು, ಜೆಡಿಎಸ್ ನಮಗೆ ನಿರೀಕ್ಷಿತ ಸಹಕಾರ ನೀಡುತ್ತಿಲ್ಲ. ಕ್ಷೇತ್ರದಲ್ಲಿ ನಮ್ಮ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಬಹುತೇಕ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ಡಿಸೆಂಬರ್ 8ರಂದು ಕಾಂ‍ಗ್ರೆಸ ಶಾಸಕರ ಸಭೆ ಕರೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಆ ಸಭೆಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಆಹ್ವಾನ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಕಾಂಗ್ರೆಸ್ ಶಾಸಕರ ಅಸಮಾಧಾನವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಲು ಪ್ರಯತ್ನ ಮಾಡುವ ಸಾಧ್ಯತೆಯಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಂದರೆ ಹೇಗಿರುತ್ತದೆ ಎಂಬ ಲೆಕ್ಕಚಾರ ಕಾಂಗ್ರೆಸ್ ಪಾಳೇಯದಲ್ಲಿ ಆರಂಭಗೊಂಡಿದ್ದು, ಬೆಳಗಾವಿಯ ವಿಧಾನಸಭೆಯ ಅಧಿವೇಶನ ಆರಂಭವಾಗುವ ಮುನ್ನವೇ ಇಂತಹ ಸಭೆ ನಡೆಸಿ ತಮ್ಮ ಶಾಸಕರ ಅಸಮಾಧಾನ ತಣ್ಣಗಾಗಿಸಲು ಈ ಪ್ರಯತ್ನ ಮಾಡಲಾಗುತ್ತಿದೆ.

ಒಂದು ವೇಳೆ ಪರಿಸ್ಥಿತಿ ಇನ್ನೂ ಬಿಗಡಾಯಿಸಿದರೆ ಬೆಳಗಾವಿ ವಿಧಾನಸಭೆಯ ಅಧಿವೇಶನಕ್ಕೆ ಇಪ್ಪತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಗೈರು ಹಾಜರಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿಯಿರುವುದರಿಂದಾಗಿ ಈ ವಿಷಯವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಸಮಧಾನ ಪಡಿಸಿ, ಸಮಸ್ಯೆ ಬಗೆಹರಿಸಲು ಸಿಎಂ ಕುಮಾರಸ್ವಾಮಿ ಮೊರೆ ಹೋಗಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಕಾಂಗ್ರೆಸ್ ಶಾಸಕರ ಸಭೆಗೆ ಸಿಎಂ ಕುಮಾರಸ್ವಾಮಿ ಕರೆದರೆ ಅದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಚಿಂತನೆ ನಡೆದಿದ್ದು, ಸಭೆಗೆ ಕರೆ ತರುತ್ತಾರಾ ಅಥವಾ ತಾವೇ ಅವರ ಅಹವಾಲು ಆಲಿಸಿ, ಆನಂತರ ಸಿಎಂ ಗಮನಕ್ಕೆ ತರುತ್ತಾರಾ ಎಂಬುದು ಇನ್ನಷ್ಟೇ ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *