ಬಾಗಲಕೋಟೆ : ಬಾಯಲರ್ ಸ್ಪೋಟಗೊಂಡ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಬಳಿ ಮಾಜಿ ಸಚಿವ ಮುರುಗೇಶ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ನಲ್ಲಿ ಸಂಸ್ಕರಣಾ ಘಟಕ ಸ್ಪೋಟಗೊಂಡಿದ್ದರಿಂದ ನಾಲ್ವರ ಸಾವನ್ನಪ್ಪಿದ್ದು, ಕಟ್ಟಡ ಸಂಪೂರ್ಣ ಕುಸಿತಗೊಂಡಿದೆ.
ಮುಧೋಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ಶುಗರ್ ಫ್ಯಾಕ್ಟರಿಯಲ್ಲಿ 150ಕ್ಕೂ ಹೆಚ್ಚು ಕೆಎಲ್ ಡಿಬಿ ಬಾಯಲರ್ ಇತ್ತು. ಅದು ಜಿಲ್ಲೆಯ ಅತಿ ದೊಡ್ಡ ಬಾಯಲರ್ ಆಗಿತ್ತು. ಇದರ ತೀವ್ರತೆ ಪರಿಣಾಮಕ್ಕೆ ಇಡೀ ಕಟ್ಟಡವೇ ನೆಲಕ್ಕೆ ಉರುಳಿದೆ.
ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ವೇಸ್ಟ್ ವಾಟರ್ ಫಿಲ್ಟರ್ ಮಾಡುವಾಗ ಸೆಫ್ಟಿ ವಾಲ್ ಕಾರ್ಯ ನಿರ್ವಹಿಸದ ಕಾರಣ ನಾಲ್ಕು ಜನ ಸಾವನ್ನಪ್ಪಿದ್ದು, ಮೂರು ಜನ ಗಾಯಗೊಂಡಿದ್ದಾರೆ ಎಂದು ಡಿಸ್ಟಲರಿ ಮಾಲೀಕ ಹಾಗೂ ಬಿಜೆಪಿ ಮುಖಂಡ ಮುರುಗೇಶ ನಿರಾಣಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಾಯಲರ್ ಸ್ಪೋಟ ಕುರಿತಂತೆ ಕೂಡಲೇ ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬಾಯಲರ್ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸಿ, ವಸ್ತು ಸ್ಥಿತಿ ಕುರಿತು ವರದಿ ಪಡೆಯಲಾಗುವುದು ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.