ಧಾರವಾಡ prajakiran.com : ಕರೋನಾ ಮಹಾಮಾರಿ ಸಂಕಷ್ಟದಿಂದ ನಲುಗಿ ಹೋಗಿರುವ ಸಾವಿರಾರು ಬಡ ಜನರ ನೆರವಿಗೆ ಧಾರವಾಡದ ಇಮ್ರಾನ್ ಕಳ್ಳಿಮನಿ ಗೆಳೆಯರ ಬಳಗ ಧಾವಿಸಿದೆ.
ಇತ್ತಿಹಾದ್ ಗ್ರೂಪ್ ಅಧ್ಯಕ್ಷ ಇಮ್ರಾನ್ ಕಳ್ಳಿಮನಿ ನೇತೃತ್ವದಲ್ಲಿ ಧಾರವಾಡದ 4300ಕ್ಕೂ ಹೆಚ್ಚು ಎಲ್ಲಾ ಧರ್ಮದ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಆ ಮೂಲಕ ಮಾನವ ಧರ್ಮ ಒಂದೇ ಎಂಬುದನ್ನು ಸಾರುವ ಮೂಲಕ ಕೋಮು ಸೌಹಾರ್ದತೆ ಎತ್ತಿ ಹಿಡಿದಿದ್ದಾರೆ.
ಈ ವೇಳೆ ಮಾತನಾಡಿದ ಇತ್ತಿಹಾದ್ ಗ್ರೂಪ್ ಅಧ್ಯಕ್ಷ ಇಮ್ರಾನ್ ಕಳ್ಳಿಮನಿ, ಬಡವರಿಗೆ ಯಾವುದೇ ಜಾತಿ, ಧರ್ಮ ಎಂಬುದಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದು ನಮ್ಮ ಜವಾಬ್ದಾರಿಯಾಗಿದೆ.
ಕರೋನಾ ತೊಲಗಿಸಲು ಎಲ್ಲರೂ ಕೂಡಿ ಹೋರಾಟ ನಡೆಸಬೇಕಿದೆ. ಅದಕ್ಕಾಗಿ ಜಿಲ್ಲೆಯ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ನೀಡುವ ಎಲ್ಲಾ ಆದೇಶವನ್ನು ಪಾಲಿಸುವ ಮೂಲಕ ಮುಸ್ಲಿಂ ಸಮುದಾಯದ ಬಾಂಧವರು ಧಾರವಾಡ ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕು.
ಅಲ್ಲದೆ, ಹುಬ್ಬಳ್ಳಿಯಲ್ಲಿ ಆಶಾ ಕಾರ್ಯಕರ್ತೆಯರ ಜೊತೆಗೆ ಅನುಚಿತವಾಗಿ ವರ್ತಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.ಅವರು ನಮಗಾಗಿ ತಮ್ಮ ಪ್ರಾಣದ ಹಂಗು ತೊರೆದು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ.
ಅವರ ಮೇಲೆ ಹಲ್ಲೆ ಮಾಡುವುದು, ಅವರ ದಾಖಲೆ ಹರಿದು ಹಾಕವುದು ಸರಿಯಲ್ಲ. ಇದರಿಂದ ಈಗಾಗಲೇ ಸಂಕಷ್ಟಕ್ಕೆಸಿಲುಕಿರುವ ಸಮುದಾಯದ ಹೆಸರು ಇನ್ನಷ್ಟು ಕೆಡಲಿದೆ ಎಂಬುದನ್ನು ಯಾರೊಬ್ಬರು ಮರೆಯಬಾರದು. ಅವರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಇತ್ತಿಹಾದ್ ಗ್ರೂಪ್ ಅಧ್ಯಕ್ಷ ಇಮ್ರಾನ್ ಕಳ್ಳಿಮನಿ ಕೈ ಜೋಡಿಸಿ ಮನವಿ ಮಾಡಿದ್ದಾರೆ.
ಕಳೆದ ಒಂಬತ್ತು ದಿನಗಳಿಂದ ಹಗಲು ರಾತ್ರಿ ಎನ್ನದೆ, 1600 ಹಿರಿಯ ನಾಗರಿಕರ ಕುಟುಂಬ 900 ಒಂಟಿಮಹಿಳೆಯರು ಮತ್ತು 1800 ಬಡ ಕುಟುಂಬಗಳಿಗೆಅಗತ್ಯ ಆಹಾರ ಧಾನ್ಯಗಳನ್ನು ವಿತರಿಸಿದ್ದೇವೆ ಎಂದು ವಿವರಿಸಿದರು.
ಧಾರವಾಡದಲ್ಲಿರುವ ಬಡವರನ್ನು ಗುರುತಿಸಲು 200 ಜನ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಅವರು ಎಲ್ಲಾ ಬಡಾವಣೆಗೆ ತೆರಳಿ ಪಟ್ಟಿ ತಯಾರಿಸಿದ್ದಾರೆ.
ಕಳೇದ ಹಲವು ದಿನಗಳಿಂದ ಪ್ಯಾಕೇಟಗಳನ್ನು ಮಾಡಿ ಅವರ ಮನೆಗೆ ತೆರಳಿ ಮಾಸ್ಕ್ ಹಾಗೂ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ ಆ ಮೂಲಕ , ನಿಮ್ಮೊಂದಿಗೆ ನಾವಿದ್ದೇವೆ.
ಯಾವುದಕ್ಕೆ ಎದೆಗುಂದಬೇಡಿ ಎಂದು ಧೈರ್ಯ ತುಂಬುತ್ತಿದ್ದೇವೆ ಎಂದು ಇತ್ತಿಹಾದ್ ಗ್ರೂಪ್ ಅಧ್ಯಕ್ಷ ಇಮ್ರಾನ್ ಕಳ್ಳಿಮನಿ ತಿಳಿಸಿದರು.
ಇದರೊಂದಿಗೆ ಒಂದು ಸಾವಿರ ಜನರಿಗೆ ಮಾಸ್ಕ್ ವಿತರಿಸಲಾಗುತ್ತಿದೆ ಹಾಗೂ ಧಾರವಾಡ ಶಹರದ ನೂರಾರು ಪೊಲೀಸರಿಗೆ ಸ್ಯಾನಿಟೇಶರ್, ಮಾಸ್ಕ ಗಳನ್ನು ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಬೀಬ್ ಫೌಂಡೇಶನ್ ಅಧ್ಯಕ್ಷ ತಾರೀಖ್ ಪಠಾಣ, ಮೂಸಾಖಾನ್ ಪಠಾಣ, ರಿಯಾಜ್ ಕಿತ್ತೂರ, ಜುಬೇರ್ ಗಿಡ್ಡಣ್ಣವರ, ಜಹೀರ ಪೀರದಾಜೆ, ಇರ್ಪಾನ್ ತಾಡಪತ್ತಿ, ವಾಸೀಮ್ ಕಿತ್ತೂರ, ಜಮೀಲ್ ಮುಲ್ಲಾ, ಸಾಜೀದ್ ತಾಡಪತ್ರಿ, ಸ್ವಾತಿ ಮಳಗಿ ಹಾಗೂ ಇತ್ತಿಹಾದ್ ಗ್ರೂಪ್ ಮತ್ತು ಹಬೀಬ್ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.