ರಾಜ್ಯ

ಲೋಕಸಭಾ ಚುನಾವಣೆ : ರಾಜ್ಯದ 28 ಕ್ಷೇತ್ರಗಳಿಗೂ ಬಿಜೆಪಿ ಉಸ್ತುವಾರಿಗಳ ನೇಮಕ

ಬೆಂಗಳೂರು : 2019ರ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಿಗೂ ಪ್ರಭಾರಿ ನೇಮಕ ಮಾಡಲಾಗಿದೆ.

ಈ ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊತ್ತಿದ್ದ ಬಿ. ಶ್ರೀರಾಮುಲು ಅವರಿಗೆ ಕೊಪ್ಪಳ ಉಸ್ತುವಾರಿ ನೀಡಿದರೆ, ಧಾರವಾಡ ಜಿಲ್ಲೆಯ ಉಸ್ತುವಾರಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಬಳ್ಳಾರಿ ಉಸ್ತುವಾರಿ ನೀಡಲಾಗಿದೆ.

ಅದೇ ರೀತಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹೊಂದಿದ್ದ ಕೆ.ಎಸ್. ಈಶ್ವರಪ್ಪ ಅವರಿಗೆ ಮೈಸೂರು ಮಡಿಕೇರಿ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ದಕ್ಷಿಣಕ್ಕೆ ಆರ್. ಅಶೋಕ , ಕೋಟಾ ಶ್ರೀನಿವಾಸ ಪೂಜಾರ್ ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಉಸ್ತುವಾರಿ ನೀಡಲಾಗಿದೆ.

ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳನ್ನು ಹಾಗೂ ಹಾಲಿ ಲೋಕಸಭಾ ಸದಸ್ಯರನ್ನು ಹೊರಗಿಟ್ಟು ಪ್ರಭಾರಿ ನೇಮಕ ಮಾಡಲಾಗಿದೆ. ಬಾಗಲಕೋಟೆಗೆ ಸಿಸಿ ಪಾಟೀಲ, ಹಾವೇರಿಗೆ ಬಸವರಾಜ ಬೊಮ್ಮಾಯಿ, ತುಮಕೂರಿಗೆ ಅರವಿಂದ ಲಿಂಬಾವಳಿ ಹೀಗೆ 28 ಲೋಕಸಭಾ ಕ್ಷೇತ್ರಗಳಿಗೂ ಸಂಚಾಲಕರು, ಪ್ರಭಾರಿಗಳ ನೇಮಕ ಮಾಡಿ ರಾಜ್ಯ ಬಿಜೆಪಿ ಆದೇಶ ಹೊರಡಿಸಿದೆ.

ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಈ ಆದೇಶ ಮಾಡಲಾಗಿದ್ದು, ಈ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಗೆ ಕಳುಹಿಸಿಕೊಡಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ ಶತಾಯ ಗತಾಯ ಗೆಲುವು ಸಾಧಿಸಲೇ ಬೇಕು ಎಂದು ಪಣತೊಟ್ಟಿದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಅಗತ್ಯ ಸಿದ್ದತೆಗಳನ್ನು ಕೂಡ ಮಾಡಿಕೊಳ್ಳುತ್ತಿದೆ.

ರಾಜ್ಯ ಮತದಾರರು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಾರಾ ಅಥವಾ ಬಿಜೆಪಿಗೆ ಮನ್ನಣೆ ನೀಡುತ್ತಾರಾ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *