ರಾಜ್ಯ

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ರಾಷ್ಟ್ರಪತಿ, ರಾಜ್ಯಪಾಲರಿಗೆ ದೂರು !

ಧಾರವಾಡ : ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ನ 18 ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ನಡೆದ ರೈತರ ಹೋರಾಟದಲ್ಲಿ ಪಾಲ್ಗೊಂಡ ರೈತರಿಗೆ ಹಾಗೂ ರೈ ಮಹಿಳೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಅವರ ವಿರುದ್ದ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಅಂತಾರಾಷ್ಟ್ರೀಯ ಯುವ ಮಾನವಹಕ್ಕುಗಳ ಸಂಘಟನೆಯ ಅಂಗಸಂಸ್ಥೆಯಾದ ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಅಧ್ಯಕ್ಷ ಮಲ್ಲಿಕಾರ್ಜುನ ರಾಜು ಹಾಗೂ ಮುಂಬೈ ಕರ್ನಾಟಕ ವಿಭಾಗದ ಅಧ್ಯಕ್ಷ ಗುರುನಾಥ ಹುಲಗೂರ ದೂರು ನೀಡಿದ್ದಾರೆ.

ಅವರು ಮಂಗಳವಾರ ಧಾರವಾಡ ಜಿಲ್ಲಾಧಿಕಾರಿ ಮೂಲಕ ಈ ದೂರಿನ ಪ್ರತಿಯನ್ನು ರವಾನಿಸಿದ್ದು, ಮುಖ್ಯಮಂತ್ರಿಗಳು ಸೆಕ್ಷನ್ 504 ಕಲಂನ ಶಾಂತಿ ಭಂಗ ಉಂಟು ಮಾಡುವ ಉದ್ದೇಶದಿಂದ ಮಹಿಳೆಯರ ಹಾಗೂ ರೈತರ ಅವಮಾನ ಮಾಡಿದ್ದಾರೆ. ಇದರಿಂದ ಸಮಾಜದ ಶಾಂತಿಗೆ ಭಂಗವುಂಟಾಗುತ್ತದೆ ಎಂದು ತಿಳಿದೂ, ಈ ರೀತಿಯ ಗೇಲಿ ಮಾತಗಳನ್ನು ಆಡಿರುವುದು ಸರಿಯಲ್ಲ. ಇದರಿಂದ ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಅಥವಾ ಯಾವುದೇ ಇನ್ನೊಬ್ಬ ವ್ಯಕ್ತಿಯನ್ನು ಅವಮಾನ ಮಾಡಲು ಪ್ರಚೋದನೆ ನೀಡುವುದು, ಅಥವಾ ಯಾವುದೇ ಅಪರಾಧ ಎಸಗುವುದು, ಈ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಲ್ಲಿ, ಅಂತಹ ವ್ಯಕ್ತಿಯನ್ನು 2 ವರ್ಷಗಳವರೆಗೆ ವಿಸ್ತರಿಸಬಹುದಾದ ಸೆರೆವಾಸದ ಶಿಕ್ಷೆಗೆ, ಅಥವಾ ದಂಡ ವಿಧಿಸುವುದು ಅಥವಾ ಎರಡನ್ನೂ ಒಳಗೊಂಡ ಶಿಕ್ಷೆಗೆ ಗುರಿಪಡಿಸಬೇಕು ಎಂಬ ನಿಯಮವಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಅಲ್ಲದೆ, ಸೆಕ್ಷನ್ 509 ಕಲಂ ಅಡಿ ಮಹಿಳೆಯ ಘನತೆ, ಗೌರವಕ್ಕೆ ಅವಮಾನ ಉಂಟು ಮಾಡುವ ಪದ, ವರ್ತನೆ ಅಥವಾ ಕ್ರಿಯೆ - ಯಾವುದೇ ಒಬ್ಬ ವ್ಯಕ್ತಿಯು ಮಹಿಳೆಯನ್ನು ಅಗೌರವಿಸುವ ರೀತಿಯಲ್ಲಿ ಯಾವುದೇ ಪದವನ್ನಾಡಿದರೆ ಅಥವಾ ಯಾವುದೇ ಶಬ್ದ ಮಾಡಿದರೆ ಅಥವಾ ವರ್ತಿಸಿದರೆ ಅಥವಾ ಯಾವುದೇ ವಸ್ತುವನ್ನು ತೋರಿಸಿದರೆ, ಇಂಥವುಗಳಿಂದ ಒಬ್ಬ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟಾದರೆ ಹಾಗೂ ಮಹಿಳೆಯ ಖಾಸಗೀತನಕ್ಕೆ ಧಕ್ಕೆ ಉಂಟಾದರೆ, ಅಂತಹ ವ್ಯಕ್ತಿಯನ್ನು ಮೂರು ವರ್ಷದವರೆಗೆ ಸೆರೆಮನೆವಾಸದ ಸಾದಾ ಜೈಲು ಶಿಕ್ಷೆ ಅಥವಾ ದಂಡ ಸಹಿತವಾಗಿ ಶಿಕ್ಷೆಗೆ ಗುರಿಪಡಿಸಬೇಕು ಎಂಬ ನಿಯಮವಿದೆ ಎಂದು ಎಚ್ಚರಿಸಿದ್ದಾರೆ.

ಆದಾಗ್ಯ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸ್ವತಃ ಜನರಕ್ಷಕರಾಗಿ , ಪ್ರತಿಷ್ಠಿತ ಹುದ್ದೆಯಲ್ಲಿದ್ದರೂ ಒಬ್ಬ ಮಹಿಳೆಯನ್ನುದ್ದೇಶಿಸಿ ‘ಇಷ್ಟು ದಿನ ಎಲ್ಲಿ ಮಲಗಿದ್ದೆ’ ಎಂದು ಮಾತನಾಡಿರುವುದು, ಮಹಿಳೆಯನ್ನು ಅವಹೇಳನ ಮಾಡಿ ಮಾತನಾಡಿದ್ದಲ್ಲದೇ, ನಾಡಿನ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ತಮ್ಮ ದುರ್ನಡತೆ ತೋರಿರುತ್ತಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ನಮ್ಮ ಸಂಸ್ಥೆಯು ಯಾವತ್ತಿಗೂ ಮಹಿಳೆಯರು ಹಾಗೂ ಈ ದೇಶದ ರೈತರ ಪರವಾಗಿ ಹೋರಾಟ ಮಾಡುತ್ತ ಬಂದಿರುತ್ತದೆ. ಕಾರಣ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಅಂತಾರಾಷ್ಟ್ರೀಯ ಯುವ ಮಾನವಹಕ್ಕುಗಳ ಸಂಘಟನೆಯ ಅಂಗಸಂಸ್ಥೆಯಾದ ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಅಧ್ಯಕ್ಷ ಮಲ್ಲಿಕಾರ್ಜುನ ರಾಜು ಹಾಗೂ ಮುಂಬೈ ಕರ್ನಾಟಕ ವಿಭಾಗದ ಅಧ್ಯಕ್ಷ ಗುರುನಾಥ ಹುಲಗೂರ ಮನವಿ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *