ಧಾರವಾಡ: ಇಲ್ಲಿಯ ಸವದತ್ತಿ ರಸ್ತೆಯಲ್ಲಿನ ಕಾಟನ್ ಇಂಡಸ್ಟ್ರೀಸ್ ಗೆ ಆಕಸ್ಮಿಕ ಬೆಂಕಿ ತಗುಲಿದ ಕೋಟ್ಯಾಂತರ ರೂಪಾಯಿ ಹಾನಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ, ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಯವರ ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ ನಲ್ಲಿ ಈ ಅವಘಡ ಸಂಭವಿಸಿದೆ.
ವಿದ್ಯುತ್ ತಂತಿಯಲ್ಲಿನ ವಿದ್ಯುತ್ ತಗುಲಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಮೂರು ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಬೆಂಕಿಯನ್ನು ಹತೋಟಿ ತರಲು ಹರ ಸಾಹನ ನಡೆಸಿದರು.
ಈ ಬೆಂಕಿ ಅವಘಡದಲ್ಲಿ ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ ರೈತರಿಂದ ಖರೀದಿಸಿ ಸಂಗ್ರಹಿಸಲಾಗಿದ್ದ ೧೦ ಸಾವಿರ ಕ್ವಿಂಟಲ್‌ಗೂ ಅಧಿಕ ಹತ್ತಿ ಬಹುತೇಕ ಸುಟ್ಟು ಕರಕಲಾಗಿ ಹೋಗಿದೆ. ಸುಮಾರು ೫ ಕೋಟಿ ರೂಪಾಯಿಗೂ ಅಧಿಕ ಹಾನಿಯಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ, ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.
ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆಯ ಪಿಎಸ್‌ಐ ಆನಂದ ಟಕ್ಕಣ್ಣವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ವರ್ಷವಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ ಉದ್ಘಾಟಿಸಿ, ಹತ್ತಿ ಮಿಲ್ ನಲ್ಲಿ ಬೃಹತ್ ರೈತ ಸಮಾವೇಶ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.