ತೆಲಂಗಾಣ :ಪಂಚರಾಜ್ಯಗಳ ಮತ ಎಣಿಕೆ ಪ್ರಕ್ರಿಯೆ ಭರದಿಂದ ನಡೆದಿರುವ ಬೆನ್ನ ಹಿಂದೆಯೇ, ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ) ಭರ್ಜರಿ ಗೆಲುವು ದಾಖಲಿಸಿ, ಮತ್ತೆ ಅಧಿಕಾರದ ಗದ್ದುಗೆ ಏರಿದೆ.
ಈಗಾಗಲೇ 91 ಸ್ಥಾನಗಳಲ್ಲಿ ಟಿಆರ್ಎಸ್ ಗೆಲುವು ಸಾಧಿಸಿದ್ದು ನಾಳೆಯೇ ಶಾಸಕಾಂಗ ಸಭೆ ಕರೆದಿದ್ದು, ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ 16, ಬಿಜೆಪಿ 4 ಮತ್ತು ಇತರೆ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆ.ಸಿ. ಚಂದ್ರಶೇಖರ ರಾವ್ ಅವರು, ಅವಧಿ ಮುಂಚೆಯೇ ಚುನಾವಣೆಗೆ ಹೋಗಿದ್ದರಿಂದ ದೇಶದೆಲ್ಲೆಡೆ ವ್ಯಾಪಕ ಚರ್ಚೆ ಆಗಿತ್ತು.
ನೂತನ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಿದ್ದ. ಕೆ ಸಿ ಆರ್ ಅವಧಿಗೆ ಮೊದಲೇ ವಿಧಾನಸಭೆಯನ್ನು ವಿಸರ್ಜಿಸಿದರ ಪರಿಣಾಮ ಮೊದಲಿಗಿಂತ ಇನ್ನಷ್ಟು ಪ್ರಬಲವಾಗಿದ್ದಾರೆ.
ತೆಲಂಗಾಣದಲ್ಲಿ ಮತ್ತೆ ಎರಡನೇ ಬಾರಿಗೆ ಕೆ. ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ.
ತೆಲಂಗಾಣದಲ್ಲಿ ಬಹು ಜನಪ್ರಿಯತೆಯನ್ನು ಗಳಿಸಿರುವ ಕೆ ಸಿ ಆರ್ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗುವಂತೆ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಟಿಆರ್ ಎಸ್ 119 ಸದಸ್ಯ ಬಲ ಹೊಂದಿದ್ದ ವಿಧಾನಸಭೆಯಲ್ಲಿ 63 ಸ್ಥಾನ ಪಡೆದು ಅಧಿಕಾರಕ್ಕೇರಿತ್ತು. ಈ ಬಾರಿ ೯೧ ಸ್ಥಾನ ಪಡೆದಿರುವುದು ವಿಶೇಷ ವಾಗಿದೆ.