ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿರುವ ಮೆಟ್ರೋ ಮೇಲ್ಸುತುವೆ ಬಿರುಕು ಬಿಟ್ಟಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಸಿಲುಕಿದ್ದಾರೆ.
ಈಗಾಗಲೇ ಬಿಎಂಆರ್ ಸಿ ಎಲ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತುರ್ತು ಕಾಮಗಾರಿ ಆರಂಭಿಸಿದ್ದು, ಮೇಲ್ಸುತುವೆ ಬಿರಕು ಬಿಡಲು ಕಾರಣವೇನು ಎಂಬುದರ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಮ್ ಗೆ ಜಾಕ್ ಅಳವಡಿಕೆ ಮಾಡಿ, ಟ್ರಿನಿಟಿ ಬಳಿ ಪ್ರತಿ ಹದಿನೈದು ನಿಮಿಷಕ್ಕೆ ಒಮ್ಮೆ ಮೆಟ್ರೋ ಓಡಾಟ ಸಾಗಿದೆ. ಅಲ್ಲದೆ, ಪಿಲ್ಲರ್ ಕೊಟ್ಟು ರೈಲು ಓಡಿಸುತ್ತಿರುವುದು ಪ್ರಯಾಣಿಕರು ಭಯಭೀತರಾಗಿದ್ದು. ಕಳಪೆ ಕಾಮಗಾರಿಯಿಂದಾಗಿ ಮೆಟ್ರೋ ಇಷ್ಟು ಬೇಗ ಹಾಳಾಗಿದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
ಬಿಎಂಆರ್ ಸಿ ಎಲ್ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದ್ದು, ಯಾವಾಗ ಮುಗಿಯುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಕೆಲವೇ ವರ್ಷಗಳಲ್ಲಿ ಬಿರುಕು ಬಿಟ್ಟು ಹಿನ್ನಲೆಯಲ್ಲಿ ಕಾಂಕ್ರೀಟ್ ಹಾಗೂ ಸಿಮೆಂಟ್ ನಲ್ಲಿ ಸಮಸ್ಯೆಯಿತ್ತಾ, ಸ್ಪಷ್ಟವಾಗಿ ಏನಾಗಿದೆ ಎಂಬುದನ್ನು ಪತ್ತೆ ಮಾಡಬೇಕಾಗಿದೆ ಎಂದು ಬಿಎಂಆರ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಅಜೇಯ ಶೇಠ್ ತಿಳಿಸಿದ್ದಾರೆ.
ಈ ಬಗ್ಗೆ ತಂತ್ರಜ್ಷರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತ ಕ್ರಮವಾಗಿ ರೈಲಿನ ವೇಗ ಇಳಿಸಲಾಗಿದೆ. ದೆಹಲಿ ಮೆಟ್ರೋ ಹಾಗೂ ಐಐಎಸ್ಸಿ ವಿಜ್ಞಾನಿಗಳೊಂದಿಗೆ ಚರ್ಚೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನನಗೆ ಮೂರು ನಾಲ್ಕು ದಿನಗಳ ಹಿಂದೆಯೇ ಮಾಹಿತಿ ಬಂದಿದೆ. ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅವರು ವರದಿ ನೀಡಿದ ನಂತರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದರಿಂದಾಗಿ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಟ್ರಿನಿಟಿ ಬಳಿ ಮಾತ್ರ 20 ನಿಮಿಷಕ್ಕೆ ಒಮ್ಮೆ ಟ್ರೇನ್ ಸಂಚರಿಸುತ್ತಿದೆ. ಉಳಿದಂತೆ ಎಲ್ಲ ಮೆಟ್ರೋ ಟ್ರೇನ್ ಸಂಚಾರ ಮಾಡಲಿವೆ.