ಜಿಲ್ಲೆ

ಕರ್ತವ್ಯಲೋಪವೆಸಗಿದ ಪ್ರಧಾನ ಗುರುಮಾತೆ, ಮುಖ್ಯಶಿಕ್ಷಕಿ ಅಮಾನತು

ಧಾರವಾಡ : ಕರ್ತವ್ಯ ಲೋಪ ಎಸಗಿದ ಪ್ರಧಾನ ಗುರುಮಾತೆ ಹಾಗೂ ಮುಖ್ಯಶಿಕ್ಷಕಿಯನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಸೇವೆಯಿಂದ ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಮಳ್ಳೂರ ಆದೇಶ ಹೊರಡಿಸಿದ್ದಾರೆ.

ಧಾರವಾಡದ ಎಮ್ಮಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆ ಮನೋರಮಾ ಸಾಂಬ್ರಾಣಿ ಹಾಗೂ ಶಾಲೆಯ ಮುಖ್ಯಶಿಕ್ಷಕಿಯೂ ಆಗಿರುವ ಧಾರವಾಡ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆಯೂ ಆಗಿರುವ ಲತಾ ಮಳ್ಳೂರ ಅವರೇ ಸೇವೆಯಿಂದ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.

ಪ್ರಧಾನ ಗುರುಮಾತೆ ಮನೋರಮಾ ಸಾಂಬ್ರಾಣಿ ಅವರು ಶೈಕ್ಷಣಿಕ ಬೇಜವಾಬ್ದಾರಿ, ಶಿಕ್ಷಕರ ಮೇಲುಸ್ತುವಾರಿ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಶಿಕ್ಷಣ ಇಲಾಖೆ ಅಪರ್ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೂಚಿಸಿದ್ದರು.

ಈ ಹಿನ್ನಲೆಯಲ್ಲಿ ಬಿಇಒ ಅಬ್ದುಲ್ ಖಾಜಿ ಅವರ ವರದಿ ಹಾಗೂ ಬೇರೆ ಶಾಲೆಗಳ ಮುಖ್ಯೊಪಾಧ್ಯಾಯರ ವರದಿಯಲ್ಲಿ ಮೇಲ್ನೊಟಕ್ಕೆ ಕರ್ತವ್ಯ ಲೋಪ ಕಂಡುಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅದೇ ರೀತಿ ಎಮ್ಮಿಕೇರಿ ಶಾಲೆಯ ಮುಖ್ಯಶಿಕ್ಷಕಿಯೂ ಆಗಿರುವ ಧಾರವಾಡ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆಯೂ ಆಗಿರುವ ಲತಾ ಮಳ್ಳೂರ ಅವರು ಸಮರ್ಪಕವಾಗಿ ಮಕ್ಕಳಿಗೆ ಪಾಠ ಮಾಡಿಲ್ಲ. ಕಲಿಕೆ ಹಾಗೂ ಬೋಧನೆಯಲ್ಲಿ ವಿಫಲ, ಶಾಲೆಗೆ ಮನಸ್ಸಿಗೆ ಬಂದಂತೆ ಹಾಜರಾಗಿ, ಶಿಕ್ಷಕರ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕುರಿತು ಈ ಹಿಂದೆ ಶಿಕ್ಷಣ ಇಲಾಖೆ ಅಪರ್ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಪತ್ರದ ಮೂಲಕ ಅನಾಮಧೇಯ ದೂರು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಶಾಲೆಗೆ ಖುದ್ದು ಭೇಟಿ ಪರಿಶೀಲನೆ ನಡೆಸಿದಾಗ ಶಾಲೆಯ ಪ್ರಧಾನ ಗುರುಮಾತೆ ಹಾಗೂ ಮುಖ್ಯಶಿಕ್ಷಕಿ ಶಾಲೆಯಲ್ಲಿ ಕಂಡು ಬಂದಿರಲಿಲ್ಲ. ಹೀಗಾಗಿ ಗರಂ ಆಗಿದ್ದ ಶಿಕ್ಷಣ ಇಲಾಖೆಯ ಅಪರ್ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಈ ಬಗ್ಗೆಯೂ ತನಿಖೆ ನಡೆಸಿ, ಕೂಡಲೇ ಶಿಸ್ತು ಕ್ರಮ ಜರುಗಿಸುವಂತೆ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Please follow and like us:

Leave a Reply

Your email address will not be published. Required fields are marked *