ಧಾರವಾಡ : ಜಲ್ಲಿ ಕಲ್ಲು, ಕಟ್ಟಡ ಕಲ್ಲು, ಸ್ಟೋನ್ ಕ್ರಸಿಂಗ್ ಉದ್ಯಮ ಅವನತಿಯ ಅಂಚಿಗೆ ತಲುಪುತ್ತಿದೆ. ರಾಜ್ಯ ಸರಕಾರದ ನೀತಿ, ನಿಯಮಗಳು ಉದ್ಯಮಕ್ಕೆ ಪೂರಕವಾಗಿಲ್ಲ ಎಂದು ಕಲಘಟಗಿ ಶಾಸಕ ಸಿ. ಎಂ. ನಿಂಬಣ್ಣವರ ಆರೋಪಿಸಿದರು.
ಅವರು ರವಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಎರಡು ತೆರಿಗೆ ಸಂಗ್ರಹ, ಹಲವು ಇಲಾಖೆಯ ಅನುಮತಿ ಕಡ್ಡಾಯ ಮಾಡಿರುವುದು ಸರಿಯಲ್ಲ. ಲೀಸ್ ಅವಧಿ ಕೇವಲ ಐದು ವರ್ಷಕ್ಕೆ ನೀಡುವುದು ಕೈ ಬಿಟ್ಟು ಕನಿಷ್ಟ ಇಪ್ಪತ್ತು ವರ್ಷಗಳ ಅವಧಿಗೆ ನೀಡಬೇಕು ಎಂದು ಆಗ್ರಹಿಸಿದರು.
ಕಠಿಣ ನಿಯಮ ಬದಲಾವಣೆ ಮಾಡಿ ಉದ್ಯಮ ಕ್ಕೆ ಪೂರಕ ವಾತವರಣ ನಿರ್ಮಿಸಲು ಪ್ರಯತ್ನ ಮಾಡಬೇಕು. ಭ್ರಷ್ಟಾಚಾರ ತಾಂಡವ ಆಡ್ತಾಯಿದೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಕಲ್ಲು ಕ್ವಾರಿ, ಸ್ಟೋನ್ ಕ್ರಸರ್, ದ್ರೋಣ್ ಸರ್ವೆ ಮಾಡಿ ಅನೇಕರಿಗೆ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ದಂಡ ವಿಧಿಸುತ್ತಿರುವುದು ಸರಿಯಲ್ಲ ಎಂದು ದೂರಿದರು.
ಗಣಿ ಮತ್ತು ಭೂ ವಿಜ್ಞಾನ ಸಚಿವರನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನ ಮಾಡಲಾಗುವುದು. ಸದನದ ಒಳಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಹದಿನೈದು ಇಪ್ಪತ್ತು ದಿನಗಳಲ್ಲಿ ಪರವಾನಿಗೆ ಸಿಗುತ್ತದೆ. ಆದರೆ ಇಲ್ಲಿ ವರ್ಷಗಟ್ಟಲೇ ಅಲೆದಾಡಿ ಬೇಸತ್ತು ಪರವಾನಿಗೆ ಸಿಗಲ್ಲ. ಸಿಕ್ಕರೂ ಅಧಿಕಾರಿಗಳ ಕೈ ಬಿಸಿ ಮಾಡಬೇಕಾಗುತ್ತದೆ. ಬ್ಯಾಂಕ್ ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಹೀಗಾ ನಾನಾ ಸಂಕಷ್ಟಗಳಿವೆ ಎಂದು ಅಸಮಾಧಾನ ಹೊರಹಾಕಿದರು.
ಬೂದನಗುಡ್ಡ ಪ್ರದೇಶದಲ್ಲಿ ಕಳೆದ ನಲವತ್ತು ವರ್ಷಗಳಿಂದ ಕಲ್ಲು ಗಣಿಗಾರಿಕೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಏಕಾಏಕಿ ಅರಣ್ಯ ಇಲಾಖೆಯ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಅಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಇನ್ನೂರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದಿವೆ. ಅಲ್ಲಿ ಯಾವುದೇ ಅರಣ್ಯ ಪ್ರದೇಶವೂ ಇಲ್ಲ. ಪ್ರಾಣಿ ಪಕ್ಷಿ, ಜೀವ ಸಂಕುಲವೂ ಇಲ್ಲ. ಸುಮ್ಮನೆ ಅಧಿಕಾರಿಗಳು ದಟ್ಟಾರಣ್ಯ ಇದೆ ಎಂದು ಹೇಳುತ್ತಾರೆ. ಒಂದು ಮೊಳಕೈ ಅಷ್ಟು ಗಿಡವನ್ನಾದರೂ ತೋರಿಸಿ ಬನ್ನಿ ಎಂದು ಅಧಿಕಾರಿಗಳಿಗೆ ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರ ಬಹಿರಂಗ ಸವಾಲು ಹಾಕಿದರು.
ನಾನು ಯಾವುದೇ ಕಲ್ಲು ಗಣಿಗಾರಿಕೆ, ಸ್ಟೋನ್ ಕ್ರಸಿಂಗ್ ಮಾಲೀಕನಲ್ಲ. ಅವರ ಏಜೆಂಟ್ ನೂ ಅಲ್ಲ. ಸಣ್ಣ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ನಾನು ಹೋರಾಟವನ್ನು ಕೈಗೆತ್ತಿಕೊಂಡಿದ್ದೇನೆ ಎಂದು ಕಲಘಟಗಿ ಶಾಸಕ ಸಿ. ಎಂ. ನಿಂಬಣ್ಣವರ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಂಗನಗೌಡ ರಾಮನಗೌಡರ, ಬಸವರಡ್ಡಿ, ಕಲ್ಲುಗಣಿ ಮಾಲೀಕರಾದ ಕಲ್ಲಪ್ಪ ಹಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.