ರಾಜ್ಯ

ಸ್ಪೀಕರ್ ರಮೇಶಕುಮಾರ-ಮಿನಿಸ್ಟರ್ ನಡುವೆ ಮಾತಿನ ಚಕಮಕಿ….!?

ಬೆಳಗಾವಿ : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ದಿನೇ ದಿನೇ ಕಾವು ಏರುತ್ತಿದ್ದು, ಉಭಯ ಸದನದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷದ ನಡುವಿನ ಮಾತಿನ ಜಟಾಪಟಿಗಿಂತ ಆಡಳಿತ ಪಕ್ಷದ ಕಾಂಗ್ರೆಸ್ ಜೆಡಿಎಸ್ ಶಾಸಕರ ಮಾತಿನ ಚಾಟಿ ಏಟು ಜೊತೆಗೆ ಸ್ಪೀಕರ್ ಕೂಡ ಸರಕಾರಕ್ಕೆ ಮೇಲಿಂದ ಮೇಲೆ ಬಿಸಿ ತಾಕಿಸುತ್ತಲೇ ಇದ್ದಾರೆ.

ಅಂತಹದೆ ಘಟನೆ ಗುರುವಾರ ವಿಧಾನ ಸಭೆಯಲ್ಲಿ ನಡೆಯಿತು. ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಅವರು ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಭೂ ಒತ್ತುವರಿ ಕುರಿತ ವರದಿ ಜಾರಿಗೆ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ ರಂಗಪ್ಪ ವಿಫಲವಾಗಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸದನದ ಗಮನ ಸೆಳೆದರು.

ಆಗ ಅದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ರಂಗಪ್ಪ ಅವರನ್ನು ಈಗಾಗಲೇ ಅಲ್ಲಿಂದ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು. ಆಗ ಸ್ಪೀಕರ್ ಅವರಿಗೆ ವರ್ಗಾವಣೆ ಅಲ್ಲರೀ ಸೇವೆಯಿಂದ ಅಮಾನತು ಮಾಡಿ ಎಂದು ಆದೇಶ ಹೊರಡಿಸಿದರು.

ಆಗ ಇದರಿಂದ ಇರಿಸುಮುರಿಸುಗೊಂಡ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಮಧ್ಯಪ್ರವೇಶ ಮಾಡಿ, ನಿಮ್ಮ ಸ್ಪೀಕರ್ ಪೀಠದಿಂದ ಅಮಾನತು ಮಾಡಿ ಎಂದು ಆದೇಶ ಹೊರಡಿಸಬೇಡಿ ಮಾನ್ಯ ಸಭಾಧ್ಯಕ್ಷರೇ ಎಂದರು.

ಅದರಲ್ಲಿ ಏನಾಗಿದೆ ಎಂಬುದು ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಡಿ.ಕೆ. ಶಿವಕುಮಾರ ಸಮಜಾಯಿಸಿ ನೀಡಿದರು. ಇದರಿಂದ ಬೇಸರಿಸಿಕೊಂಡ ಸ್ಪೀಕರ್ ರಮೇಶಕುಮಾರ, ಸಚಿವರಿಗೆ ತಿರುಗೇಟು ನೀಡಿದರು.

ಸರಕಾರದಲ್ಲಿ ಅಷ್ಟೊಂದು ಮಡಿವಂತಿಕೆ ಬೇಡ. ನಾನು ಸಂಬಂಧಪಟ್ಟವರಿಗೆ ಪರಿಶೀಲನೆ ನಡೆಸಲು ಕೋರಿದ್ದೇನೆ ಹೊರತು ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅದರಿಂದ ಇರಿಸುಮುರಿಸುಗೊಂಡ ಸಚಿವ ಶಿವಕುಮಾರ ಸುಮ್ಮನಾದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕುಡಚಿ ಶಾಸಕ ಪಿ ರಾಜೀವ್ ಸ್ಪೀಕರ್ ಬೆಂಬಲಕ್ಕೆ ಧಾವಿಸಿದರು.

ಒಟ್ಟಾರೆ, ಸಚಿವರು ಸದನಕ್ಕೆ ಉತ್ತರಿಸುವ ವೇಳೆ ಇನ್ನೊಬ್ಬ ಸಚಿವರು ಮಧ್ಯಪ್ರವೇಶ ಮಾಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದ್ದು ಸುಳ್ಳಲ್ಲ.

Please follow and like us:

Leave a Reply

Your email address will not be published. Required fields are marked *