ಗದಗ : ರಾಜ್ಯದ ಪಶು ಸಂಗೋಪನೆ ಇಲಾಖೆ ಯಲ್ಲಿ ಕಾರ್ಯ ನಿರ್ವಹಿಸಬೇಕಾದ ಅನೇಕ ವೈದ್ಯರು ವಿವಿಧ ಇಲಾಖೆಗಳಿಗೆ ನಿಯೋಜನೆಗೊಂಡಿರುವುದು ರದ್ದುಗೊಳಿಸಲಾಗಿದೆ. ಅವರು ಶೀಘ್ರವೇ ಮಾತೃ ಇಲಾಖೆಗೆ ಹಾಜರಾಗದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಎಚ್ಚರಿಕೆ ನೀಡಿದ್ದಾರೆ.
ಅವರು ಭಾನುವಾರ ಗದಗ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರಕಾರದ ಬೇರೆ ಬೇರೆ ಇಲಾಖೆಗೆ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಈ ಕುರಿತು ಆದೇಶ ಹೊರಡಿಸಲಾಗಿದೆ. ಆದರೂ ಕೂಡ ವೈದ್ಯರು ಸೇವೆಗೆ ಹಾಜರಾಗಿಲ್ಲ. ವಿಶೇಷವಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಿಡುಗಡೆಗೊಳಿಸಲು ಸಿದ್ದರಿಲ್ಲ. ಹೀಗಾಗಿ ಇಲಾಖೆ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ತಕ್ಷಣದಿಂದಲೇ ಬಿಡುಗಡೆಗೊಳಿಸುವಂತೆ ಸೂಚಿಸಲಾಗಿದೆ ಎಂದರು.
ಕಳೆದ ಹಲವು ವರ್ಷಗಳಿಂದ ಈ ಪ್ರಕ್ರಿಯೆ ನೆನೆಗುದಿಗೆ ಬಿದ್ದ ಪರಿಣಾಮ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಾಗಿತ್ತು. ರಾಜ್ಯದ ಸಮ್ಮೀಶ್ರ ಸರಕಾರ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಠಿಣ ನಿಲುವು ತಾಳಿದ ಪರಿಣಾಮ ಎಲ್ಲ ವೈದ್ಯರನ್ನು ಹಿಂದಕ್ಕೆ ಪಡೆದು ವಿವಿಧ ಸ್ಥಳಗಳಿಗೆ ಪೋಸ್ಟಿಂಗ್ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ವಿವರಿಸಿದರು.