ಅಂತಾರಾಷ್ಟ್ರೀಯ

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ದಾನಮ್ಮ ದೇವಿ ಜಾತ್ರೆ

ಗುಡ್ಡಾಪುರ (ವಿಜಯಪುರ) : ಗುಡ್ಡಾಪುರ ದಲ್ಲಿ ಮಹಾ ಮಹಿಮೆ, ಶರಣೆ ಶ್ರೀ ದಾನಮ್ಮ ದೇವಿ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಶ್ರೀ ದಾನಮ್ಮದೇವಿ ಭಕ್ತರು ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ.ಮೀರಜ್ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸುತ್ತಾರೆ.

ಜಿಲ್ಲೆಯ ಗಡಿ ಭಾಗವಾಗಿರುವ ಗುಡ್ಡಾಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ವಿಜ್ರಂಭಣೆಯಿಂದ ಇಲ್ಲಿ ಅನ್ನ ದಾಸೋಹ, ಅಡ್ಡಪಲ್ಲಕ್ಕಿ, ಲಕ್ಷ ದೀಪೋತ್ಸವ ಹಾಗೂ ರಥೋತ್ಸವ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಾದಯಾತ್ರೆಯ ಮೂಲಕ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ.

ಇಲ್ಲಿ ಶ್ರೀ ದಾನಮ್ಮ ದೇವಿಗೆ ಮೂರು ಹೊತ್ತು ಪೂಜೆ ನಡೆಯಲಿದ್ದು, ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ದಾನಮ್ಮ ದೇವಿ ಹೆಸರಿನಲ್ಲಿ ಇಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಕೂಡ ನಡೆಯುತ್ತದೆ.

ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ದಾರಿಯಲ್ಲಿಯೇ ಅನೇಕರು ಅನ್ನಪ್ರಸಾದದ ವ್ಯವಸ್ಥೆ ಕೂಡ ಮಾಡಿರುತ್ತಾರೆ. ಬೇಡಿದ ವರವನ್ನು ದಯ ಪಾಲಿಸುವ ವರ ದಾನೇಶ್ವರಿ ಭಕ್ತರ ಆಕರ್ಷಣೆಯ ಸುಕ್ಷೇತ್ರ ಗುಡ್ಡಾಪುರ ದಾನಮ್ಮ ದೇವಿಯ ದರ್ಶನ ಪಡೆಯುವುದೆ ಒಂದು ಭಾಗ್ಯ.

ವಿಶ್ವದಲ್ಲಿ ಅಶಾಂತಿ, ಅಧರ್ಮ, ಸಂಘರ್ಷ ನಡೆದಾಗ ಸುಳ್ಳು ಸತ್ಯದ ಮೇಲೆ ಮೆರೆದಾಡುತ್ತಿರುವಾಗ ಮನುಕುಲದ ಉದ್ದಾರಕ್ಕಾಗಿ ಧರೆಗೆ ಅವತರಿಸಿ ಸಾಧಾರಣ ಜೀವನದಲ್ಲಿ ಸುಧಾರಣೆ ತಂದು ನಾಡಿನ ಜನರ ಅಜ್ಞಾನ ಅಳಿಸಿ ಸುಜ್ಞಾನ ತೋರಿದ ಮಹಾನ್ ಶರಣ ಸಂತ ಮಹಾ ತಪಸ್ವಿಗಳ ನಾಡು ನಮ್ಮದು. ಅವರ ಸಾಲಿನಲ್ಲಿ ಬರುವ 12 ನೇ ಶತಮಾನದ ಶ್ರೀ ದಾನಮ್ಮದೇವಿ ತಮ್ಮ ದಾನ ಧರ್ಮ ದಿಂದಲೇ ಕೋಟ್ಯಂತರ ಜನರ ಅಮ್ಮನಾಗಿ ಗುಡ್ಡಾಪುರದಲ್ಲಿ ನೆಲೆಸಿದ್ದಾರೆ ಎಂಬ ಪ್ರತೀತಿಯಿದೆ.

ಮಹಾರಾಷ್ಟ್ರದ ಜತ್ತ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಪಂಚಾಳ ಮನೆತನದ ಶ್ರೀ ವೀರಭದ್ರನ ಪರಮ ಭಕ್ತರಾದ ಅನಂತರಾಯ ಮತ್ತು ಶಿರಸಮ್ಮ ದಂಪತಿಗೆ ಬಹಳ ವರ್ಷ ಕಳೆದರೂ ಮಕ್ಕಳಿಲ್ಲ ಎಂಬ ಕೊರಗೂ ಇತ್ತು. ದಂಪತಿಗಳು ವೀರಭದ್ರನನ್ನು ಬೇಡಿಕೊಳ್ಳಲಾಗಿ ಸ್ವಪ್ನದಲ್ಲಿ ಬಂದು ಆಶೀರ್ವಾದ ಮಾಡಿದರು. ನವಮಾಸ ಕಳೆದ ನಂತರ ಶಿರಸಮ್ಮ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿನಲ್ಲಿನ ಅಮೋಘ ಪ್ರಜ್ವಲತೆ ಎಲ್ಲರ ಸಂತೋಷಕ್ಕೆ ಕಾರಣವಾಗುತ್ತದೆ.

ಮಗು ಹಾಲು ಕುಡಿಯದಾದಾಗ ಒಂದು ಚಿಂತೆ ಶುರುವಾಗಿ ಬಿಡುತ್ತದೆ. ಜಂಗಮರ ಆದೇಶದಂತೆ ಜನನದಿಂದ ಹದಿಮೂರನೇ ದಿನಕ್ಕೆ ಮಂಗಲ ಗೀತೆ ಹಾಡುತ್ತ ಲಿಂಗ ಧಾರಣೆ ಮಾಡುತ್ತಿದ್ದಂತೆ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಎಲ್ಲರೂ ಸೇರಿ ಮಗುವಿಗೆ ಲಿಂಗಮ್ಮ ಎಂದು ನಾಮಕರಣ ಮಾಡುತ್ತಾರೆ.

ತಂದೆ ತಾಯಿಯರ ಲಿಂಗ ಪೂಜೆ ಶಿವಶರಣರ ಕಥೆ ಕೇಳಿ ಪ್ರೇರಿತಳಾದ ಲಿಂಗಮ್ಮ ಕಲ್ಯಾಣದಲ್ಲಿರುವ ಶರಣರನ್ನು ಕಾಣಬೇಕೆಂದು ಕಲ್ಯಾಣದೆಡೆಗೆ ಪ್ರಯಾಣಿಸುತ್ತಾಳೆ.

ಲಿಂಗಮ್ಮ ಕಲ್ಯಾಣ ಸಮೀಪದ ಬಿಲ್ವವನದಲ್ಲಿ 21 ದಿನಗಳ ಕಾಲ ಶಿವಯೋಗಾರೂಢಳಾಗುತ್ತಾಳೆ. ಬಡವರ ದೀನರ ಸೇವೆ ಮಾಡುತ್ತ ಕಾಲ ಕಳೆಯುತ್ತಲೇ ಕಲ್ಯಾಣದಲ್ಲಿ ಮನೆ ಮಾತಾಗುತ್ತಾಳೆ. ಬಸವಣ್ಣ ನವರು ಇವರ ಕಾಯಕ ವೀಕ್ಷಿಸಿ ಬೆರಗಾಗಿ ಸಂತೋಷ ಪಡುತ್ತಾರೆ.

ಬಸವಣ್ಣನವರ ಮಹಾಮನೆ ಪ್ರವೇಶಿಸಿ ಲಿಂಗಪೂಜೆಯೊಂದಿಗೆ ನಿತ್ಯ ಜಂಗಮರ ಸೇವೆ ಮಾಡುತ್ತ ಕಾಯಕ ದಾಸೋಹ ದಲ್ಲೆ ಪರಮಾತ್ಮನನ್ನು ಕಾಣುತ್ತಾಳೆ. ಈ ಎಲ್ಲ ಕಾಯಕ ದಾಸೋಹ ನೋಡಿದ ಬಸವೇಶ್ವರ ನೀನು ಕೇವಲ ಲಿಂಗಮ್ಮ ಅಲ್ಲ ದಾನ ಸ್ವರೂಪಿ. ದಾನ ದಾಸೋಹಿ. ದಾನೇಶ್ವರಿ ಎಂದು ಕೂಗಿ ಹೇಳುತ್ತಾರೆ. ಅಂದಿನಿಂದ ಈ ಲೋಕಕ್ಕೆ ದಾನ ದಾಸೋಹಿ ದಾನಮ್ಮ ದೇವಿ ಈ ಲೋಕಕ್ಕೆ ಪರಿಚಯಲಾಗುತ್ತಾಳೆ.

ಕಲ್ಯಾಣದಲ್ಲಿ ದಾನಮ್ಮಳಾದ ಲಿಂಗಮ್ಮ ತವರಿಗೆ ಬರುತ್ತಿದ್ದಂತೆ ಎಲ್ಲಲ್ಲೂ ಸಂಭ್ರಮ ಮನೆ ಮಾಡುತ್ತದೆ. ಅದ್ದೂರಿಯಾಗಿ ಸ್ವಾಗತಿಸಲಾಗುತ್ತದೆ. ಕಲ್ಯಾಣದಿಂದ ಮರಳಿ ಬಂದ ದಾನಮ್ಮ ವಿವಾಹಕ್ಕೆ ಸಮ್ಮತಿ ಸೂಚಿಸುತ್ತಾಳೆ. ದಾನಮ್ಮ ದೇವಿ ತನ್ನೋಡನೆ 551 ನವ ಜೋಡಿಗಳ ವಿವಾಹ ಆಗುತ್ತದೆ. ದಾನಮ್ಮ ದೇವಿ ಮದುವೆಯಾದ ಸ್ಥಳ ಅಪಾರ ಭಕ್ತರ ಶೃದ್ದಾಕೇಂದ್ರವಾಗಿದೆ. ಇಲ್ಲಿ ಎಂದೂ ಬತ್ತದ ನೀರಿನ ಹೋಂಡ ಅಮ್ಮನ ಪವಾಡಕ್ಕೆ ಸಾಕ್ಷಿಯಾಗಿದೆ.

-ಮಹೇಶ್ ಶರ್ಮ, ಅಥಣಿ, ಬೆಳಗಾವಿ ಜಿಲ್ಲೆ

Please follow and like us:

Leave a Reply

Your email address will not be published. Required fields are marked *