ಧಾರವಾಡ : ಸುಮಾರು ೨೫ ವರುಷಗಳ ಕಾಲ ಜೆನೆಟಿಕ್ ಇಂಜನಿಯರಿಂಗ್ದಲ್ಲಿ ನಡೆಸಿದ ಸುದೀರ್ಘ ಸಂಶೋಧನೆಯೊಂದಿಗೆ ಕ್ಯಾನ್ಸರ್ ರೋಗಕ್ಕೆ ಹೊಸ ಔಷಧಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಹಿರಿಯ ಸಂಶೋಧಕ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಎಂ. ಸ್ವಾಮಿ ಹೇಳಿದರು.
ಅವರು ನಗರದ ತತ್ವಾನ್ವೇಷಣ ಮಂದಿರದಲ್ಲಿ ವೀರಶೈವ ಜಂಗಮ ಸಂಸ್ಥೆ ಹಮ್ಮಿಕೊಂಡ ೧೬೧ನೇ ಉಪನ್ಯಾಸ ದಲ್ಲಿ ಮಾತನಾಡಿದರು.
ಪ್ರಸ್ತುತ ಈ ಆವಿಷ್ಕಾರದಿಂದ ಸಿದ್ಧಪಡಿಸಿರುವ ಔಷದಿಯು ಕರಳು, ಸ್ತನ ಹಾಗೂ ಗರ್ಭ ಕೋಶಗಳ ಕ್ಯಾನ್ಸರ್ಗಳಿಗೆ ರಾಮಬಾಣವಾಗಿದೆ. ಇದರಿಂದ ಜೀವಕೋಶಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಾಗಿ ಔಷಧಿಯು ನೇರವಾಗಿ ಕ್ಯಾನ್ಸರ್ ಗಡ್ಡೆ ತಲುಪುತ್ತದೆ. ಇದು ಈ ಔಷಧಿಯ ವಿಶೇಷತೆಯಾಗಿದೆ ಎಂದರು.
ತಮ್ಮ ಪತ್ನಿ ಡಾ. ಶಶಿಕಲಾ ಸ್ವಾಮಿ ಅವರೊಂದಿಗೆ ಸೇರಿಕೊಂಡು ನಡೆಸಿದ ಸುದೀರ್ಘ ಸಂಶೋಧನೆಯಲ್ಲಿ ‘ರಿಕಾಂಬಿನೆಂಟ್ ಲೆಕ್ಟಿನ್’ ಔಷಧಿಗೆ ಭಾರತ ಮತ್ತು ಯುರೋಪಗಳ ಪೇಟೆಂಟ್ ಸಿಕ್ಕಿದೆ. ಈ ಸಂಶೋಧನೆಯನ್ನು ಬಯೋಟೆಕ್ನಾಲಜಿ ಇಂಡಸ್ಟ್ರೀಸ್ ರಿಸರ್ಚ ಅಸಿಸ್ಟೆನ್ಸ್ ಕೌನ್ಸಿಲ್ ಮಧ್ಯವರ್ತಿಯಾಗಿ ಔಷಧವನ್ನು ಬಳಕೆಗೆ ಯೋಗ್ಯವಾಗಿರಿಸಲು ಮುಂಬೈನ ಯುನಿಕೆಮ್ ಪ್ರಯೋಗಾಲಯದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎಂದೂ ಅವರು ಹೇಳಿದರು.
ಸಂಶೋಧನಾ ಕ್ಷೇತ್ರಕ್ಕೆ ತಾಳ್ಮೆ ಅತೀ ಮುಖ್ಯ. ನಿರಂತರ ಪ್ರಯತ್ನವನ್ನು ಮುಂದುವರೆಸಬೇಕು. ಯಾವುದೇ ಅವಿಷ್ಕಾರ ಮಾಡುವಾಗ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಸಂಶೋಧನೆಯ ಬದ್ಧತೆಯಿಂದ ಹಿಂದೆ ಸರಿಯಬಾರದು. ಯಶಸ್ಸು ಸಿಗುವವರೆಗೂ ಧೃತಿಗೆಡದೆ ಪ್ರಯತ್ನಿಸಬೇಕು ಎಂದು ಡಾ. ಸ್ವಾಮಿ ತಮ್ಮ ಅನುಭವ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ವೀರಶೈವ ಜಂಗಮ ಸಂಸ್ಥೆಯ ವತಿಯಿಂದ ಪ್ರೊ. ಬಿ.ಎಂ. ಸ್ವಾಮಿ ಅವರನ್ನು ಗೌರವಿಸಲಾಯಿತು. ನಿವೃತ್ತ ಎ.ಸಿ.ಪಿ. ಜಿ. ಆರ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನೀಲಲೋಚನಾ ಹಿರೇಮಠ ಪ್ರಾಯೋಜಕತ್ವದಲ್ಲಿ ಉಪನ್ಯಾಸ ನಡೆಯಿತು. ಪಂಪಾಪತಿ ಹಿರೇಮಠ, ಡಾ. ಜಿ. ಆರ್. ಪುರಾಣಿಕ, ಬಿ. ಎಸ್. ಬಿದರಿಮಠ, ಪ್ರೊ. ಇಂದುಮತಿ ಸುಂಕದಮಠ, ಎನ್. ಸಿ. ಹಿರೇಮಠ, ಅನಸೂಯಾ ಹಿರೇಮಠ, ಜಗದೀಶ ಸುಬ್ಬಾಪುರಮಠ, ಜಿ. ಜಿ. ಹಿರೇಮಠ, ವ್ಹಿ ಎಸ್. ಹಿರೇಮಠ ಇದ್ದರು.