ಧಾರವಾಡ : ನಮ್ಮ ಸಕಲ ಕಷ್ಟಗಳಿಗೆ ಧರ್ಮವೇ ದಿವ್ಯ ಔಷಧಿ. ಆದ್ದರಿಂದ ಮನುಷ್ಯ ತನ್ನ ಜೀವನ ಸಾರ್ಥಕಗೊಳಿಸಿಕೊಳ್ಳಲು ಧರ್ಮವನ್ನು ಪಾಲಿಸಬೇಕು ಎಂದು ಶ್ರೀಶೈಲ ಸೂರ್ಯಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಮಳೆಪ್ಪಜ್ಜ ನೂತನ ಮಠದ ಲೋಕಾರ್ಪಣೆ ನಿಮಿತ್ತ ಜರುಗಿದ ನಾಲ್ಕನೇ ದಿನದ ಧರ್ಮಸಭೆಯ ದಿವ್ಯಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಧರ್ಮವನ್ನು ಸರಿಯಾಗಿ ತಿಳಿದುಕೊಂಡು ಆಚರಿಸಬೇಕು.ಮತ್ತು ಜೀವನದಲ್ಲಿ ಧರ್ಮದ ಸಾರವನ್ನು ಅಳವಡಿಸಿಕೊಳ್ಳಬೇಕು. ಭೌತಿಕ ರೋಗಕ್ಕೆ ವೈದ್ಯರು ಚಿಕಿತ್ಸೆ ನೀಡಿದರೆ, ಭವ ರೋಗಕ್ಕೆ ಧರ್ಮವೇ ಮದ್ದು ಎಂದರು.
ಮನುಷ್ಯ ಬೇರೆಲ್ಲ ಪ್ರಾಣಿಗಳಿಗಿಂತ ಭಿನ್ನ ಮತ್ತು ಶ್ರೇಷ್ಠ. ಯಾವ ಪ್ರಾಣಿಗೂ ಧರ್ಮ ಆಚರಿಸುವ ಮತ್ತು ಅಳವಡಿಸಿಕೊಳ್ಳುವ ಅವಕಾಶವಿಲ್ಲ. ಇಂತಹ ಅವಕಾಶ ಪಡೆದಿರುವ ಮನುಷ್ಯನು ಧರ್ಮ ಪಾಲಿಸದಿದ್ದರೆ ಪ್ರಾಣಿಯಾಗುತ್ತಾನೆ. ಧರ್ಮ ಆಚರಣೆಗೆ ಶಾರೀರಿಕ ಆರೋಗ್ಯವು ಅಗತ್ಯ. ಉತ್ತಮ ಆರೋಗ್ಯ ಹೊಂದಲು ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಭಗವತ್ಪಾದರು ಕರೆ ನೀಡಿದರು.
ಉಪ್ಪಿನಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ, ಉಗರಗೋಳದ ಶ್ರೀ ಮಹಾಂತ ದೇವರು, ಬಳ್ಳಾರಿ ಕಲ್ಯಾಣಮಠದ ಕಲ್ಯಾಣ ಮಹಾಸ್ವಾಮೀಜಿ, ದುಂಡಯ್ಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಳೆಪ್ಪಜ್ಜನ ಮಠದ ನೂತನ ಉತ್ತರಾಧಿಕಾರಿಗಳನ್ನಾಗಿ ಸಂಗಮೇಶ ದೇವರನ್ನು ಘೋಷಿಸಿ,ಅಧಿಕಾರ ವಹಿಸಿ ಕೊಡಲಾಯಿತು.
ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಗಣ್ಯರಾದ ಪಿ.ಎಚ್.ನೀರಲಕೇರಿ, ಬಿ.ಟಿ.ರೆಡ್ಡಿ, ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಜಿಪಂ ಸದಸ್ಯ ಕರಿಯಪ್ಪ ಮಾದರ, ತಾಪಂ ಸದಸ್ಯ ಮಹಾವೀರ ಜೈನರ್, ಎಪಿಎಂಸಿ ಸದಸ್ಯ ಚೆನವೀರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಈರಪ್ಪ ಗಂಟಿ, ಮಾಜಿ ಅಧ್ಯಕ್ಷ ಮಂಜುನಾಥ ತಿರ್ಲಾಪುರ, ಉಪಸ್ಥಿತರಿದ್ದರು.
ಬಳಿಕ ಸರಿಗಮಪ ಕಾರ್ಯಕ್ರಮ ಖ್ಯಾತಿಯ ಜ್ಞಾನೇಶನಿಂದ ಗಾಯನ ಕಾರ್ಯಕ್ರಮ ನಡೆಯಿತು.