ಬೆಂಗಳೂರು : ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೆ ಸಿಸಿಬಿ ಪೊಲೀಸರು ಸಮಯ ಟಿವಿ ಮಾಜಿ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ ತಾತಾಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಆದರೆ ವಿಚಾರಣೆಗೆ ಹಾಜರಾಗಿ 35 ಕೋಟಿ ಬ್ಯಾಂಕ್ ವರ್ಗಾವಣೆ ಹಾಗೂ 5 ಕೋಟಿ ನಗದು ಹಣ ವರ್ಗಾವಣೆ ಮಾಹಿತಿ ನೀಡುವುದು ಬಿಟ್ಟು ಸಿಸಿಬಿ ಪೊಲೀಸರ ವಿರುದ್ದವೇ ಈಗ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಸುನೀಲಕುಮಾರ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಅಲ್ಲದೆ, ಸಿಸಿಬಿ ಪೊಲೀಸರು ತನಗೆ ವೈಯಕ್ತಿಕ ಹಿಂಸೆ ನೀಡುತ್ತಿದ್ದಾರೆ. ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಬೆದರಿಕೆ ಒಡ್ಡಿದ್ದಾರೆ ಎಂದು.ಆಡಿಯೋ ಸಹ ಬಿಡುಗಡೆ ಮಾಡಿದ್ದಾರೆ.
ಇವರು ಆಂಬಿಡೆಂಟ್ ಕಂಪನಿ ಮಾಲೀಕ್ ಫರೀದ್ ಬಳಿ 40 ಕೋಟಿ ರೂಪಾಯಿ ಹಣ ಪೀಕಿ, ಮಾಧ್ಯಮಗಳಲ್ಲಿ ಪ್ರಸಾರಗೊಳ್ಳದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಸಿಸಿಬಿ ಪೊಲೀಸರು ತನಿಖೆಯ ಬೆನ್ನು ಹತ್ತಿದ್ದಾಗ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಹೆಸರು ಕೇಳಿಬಂದ ಬೆನ್ನಲ್ಲೇ ಸಮಯ ಟಿವಿ ಮಾಜಿ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ ತಾತಾ ಸಹ ಕೇಳಿಬಂದಿತ್ತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಎಸಿಪಿ ವೆಂಕಟೇಶ ಪ್ರಸನ್ನ, ನಾನು ತನಿಖಾಧಿಕಾರಿ ಯಾಗಿ ನನ್ನ ಕಾರ್ಯ ನಿರ್ವಹಿಸಿದ್ದೇನೆ. ಇದೀಗ ಅವರು ನನ್ನ ವಿರುದ್ದವೇ ಆರೋಪಿ ದೂರು ನೀಡಿದ್ದಾನೆ, ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರು ಮಾಹಿತಿ ಕೇಳಿದರೆ ಸೂಕ್ತ ದಾಖಲೆಗಳ ಸಮೇತ ಉತ್ತರ ನೀಡುವೆ.
ನಾನು ಯಾವುದೇ ವೈಯಕ್ತಿಕ ಹಿಂಸೆ ನೀಡಿಲ್ಲ. ಆಡಿಯೋ ಸೃಷ್ಟಿ ಮಾಡಲಾಗಿದ್ದು. 40 ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ಸಮಯ ಟಿವಿ ಮಾಜಿ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ ತಾತಾ 35 ಕೋಟಿ ವರ್ಗಾವಣೆ ಆಗಿದೆ 5 ಕೋಟಿ ನಗದು ಪಡೆದಿದ್ದಕ್ಕೆ ಬೆಂಗಳೂರು ಉಪವಿಭಾಗಾಧಿಕಾರಿ ನಾಗರಾಜ್ ಅವರಿಗೆ ಆಸ್ತಿ ಮುಟ್ಟುಗೋಲು ಹಾಕಲು ಶಿಫಾರಸ್ಸು ಮಾಡಲಾಗಿದೆ.
ವಿಜಯ್ ತಾತಾ ನಮಗೆ ಲೆಕ್ಕ ತೋರಿಸಿಲ್ಲ. ತನಿಖೆಗೆ ಹಾಜರಾಗದೆ, ಪೊಲೀಸರ ವಿರುದ್ದವೇ ಪಿತೂರಿ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಆಂಬಿಡೆಂಟ್ ಕಂಪನಿಯ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವುದು ಸುಳ‍್ಳಲ್ಲ.