ಬೆಳಗಾವಿ : ಕಬ್ಬಿನ ಬಾಕಿ ಹಣ ಮರುಪಾವತಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ತೀವ್ರಗೊಂಡ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಯೋಗ್ಯ ಬೆಲೆ ನೀಡುವುದಾಗಿ ಕಬ್ಬು ಅರೆದು, ಸಕ್ಕರೆ ಮಾಡಿ ಮಾರಾಟ ಮಾಡಿಕೊಂಡರೂ, ರೈತರಿಗೆ ಹಣ ನೀಡದೆ ಕಾಲಾಹರಣ ಮಾಡುತ್ತಿದ್ದಾರೆ. ಕೇಳಿದರೆ ಏನಾದರೂ ಸಬೂಬು ಹೇಳಿ ನುಣಚಿಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರ ಕೇವಲ 38 ಕೋಟಿ ಬಾಕಿ ಹಣ ಮರು ಪಾವತಿಸುವುದಿದೆ ಎಂದು ಹೇಳಿದರೆ, ರೈತರು ಹಾಗೂ ರೈತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 159 ಕೋಟಿ ಹಣ ರೈತರಿಗೆ ಬಾಕಿ ಉಳಿದಿದೆ. ಹೀಗೆಲ್ಲಾ ಸುಳ್ಳು ಅಂಕಿಅಂಶಗಳನ್ನು ಅದರಲ್ಲೂ ಸಕ್ಕರೆ ಆಯುಕ್ತರು ನೀಡುವ ಮಾಹಿತಿ ನಂಬಬೇಡಿ. ಅವರು ಸುಳ್ಳು ಮಾಹಿತಿ ನೀಡಿ ಸಭೆಯ ದಾರಿ ತಪ್ಪಿಸುತ್ತಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಮಾಲಿಕತ್ವದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಬಾಕಿ 20 ಕೋಟಿ, ಸತೀಶ್ ಜಾರಕಿಹೊಳಿ ಮಾಲೀಕತ್ವದ ಸತೀಶ್ ಶೂಗರ್ಸ್ ಫ್ಯಾಕ್ಟರಿ 30 ಕೋಟಿ ಸೇರಿದಂತೆ ಹಲವು ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿವೆ.
ಇನ್ನೂಳಿದಂತೆ ಮಾಜಿ ಸಚಿವ ಎಸ್.ಆರ್ ಪಾಟೀಲ 18 ಕೋಟಿ, ಶಾಸಕ ಶ್ರೀಮಂತ ಪಾಟೀಲ 5 ಕೋಟಿ, ಶಾಸಕ ಆನಂದ ನ್ಯಾಮಗೌಡ 17 ಕೋಟಿ, ಶ್ಯಾಮನೂರ ಶಿವಶಂಕರಪ್ಪ, ಪ್ರಭಾಕರ ಕೋರೆ, ಲಕ್ಷ್ಮಿ ಹೆಬ್ಬಾಳಕರ್ ಒಡೆತನದ ಸಕ್ಕರೆ ಕಾರ್ಖಾನೆ ಹೀಗೆ ಅನೇಕ ರಾಜಕಾರಣಿಗಳು ರೈತರಿಂದ ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡಿವೆ.
ಈ ಹಿನ್ನಲೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಕ್ಕರೆ ಆಯುಕ್ತರು, ಸಕ್ಕರೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಇರ್ತಥ್ಯಕ್ಕೆ ಸಮಾಲೋಚನೆ ನಡೆಸಿದರು.