ಹುಬ್ಬಳ್ಳಿ : ಸಾರ್ವಜನಿಕ ಶಿಕ್ಷಣ ಇಲಾಖೆಯ ಹುಬ್ಬಳ್ಳಿ ಶಹರ ವಲಯದ ಬಿಆರ್‌ಪಿ ಅಶೋಕ ಮದಭಾವಿ ಅವರನ್ನು ದುರ್ನಡತೆ ಆಧಾರದಲ್ಲಿ ಅಮಾನುತುಗೊಳಿಸಿ ಉಪನಿರ್ದೇಶಕ ಆರ್ ಎಸ್. ಮಳ್ಳೂರು ಆದೇಶ ಹೊರಡಿಸಿದ್ದಾರೆ.
ಇವರು ಹುಬ್ಬಳ್ಳಿಯ ಸಂತೋಷ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಖ್ಯಶಿಕ್ಷಕರ ಕೊಠಡಿಗೆ ಬೀಗ ಹಾಕಿದ್ದನ್ನು ಕಂಡು ದೈಹಿಕ ಶಿಕ್ಷಕ ಎನ್.ಬಿ. ಕಳ್ಳಿಹಾಳ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರು.
ಇದರಿಂದ ಶಾಲೆ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲೆಗೆ ಸಮುದಾಯದಲ್ಲಿ ಕಳಂಕ ತಂದಿದ್ದಾರೆ ಎಂದು ಇವರ ಗುಂಡಾಗಿರಿಯ ಬಗ್ಗೆ ದೂರು ನೀಡಿದ್ದರು.
ಅದೇ ರೀತಿ ಬಿಆರ್‌ಪಿ ಅಶೋಕ ಮದಭಾವಿ ಅವರ ಮೇಲೆ ಬಿಇಒ ಕಚೇರಿಯ ಲೆಕ್ಕ ಸಹಾಯಕಿಯೊಬ್ಬರೊಂದಿಗೆ ಅನಾಗರಿಕ ವರ್ತನೆ ತೋರಿದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಹಿಂಸೆ ಹಾಗೂ ದೌರ್ಜನ್ಯದಿಂದ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದರು.
ಇದರೊಂದಿಗೆ ಇವರ ಮೇಲೆ ಕರ್ತವ್ಯ ಲೋಪ, ಗುಂಡಾ ವರ್ತನೆ, ಉದ್ಘಟತನದ ಮಾತುಗಳು, ಕೊಟ್ಟ ಕೆಲಸ ಸರಿಯಾಗಿ ನಿರ್ವಹಿಸದೆ ಮೇಲಾಧಿಕಾರಿಗಳ ಗಮನಕ್ಕೂ ತಾರದೆ, ಅನಧಿಕೃತವಾಗಿ ಗೈರು ಆಗುತ್ತಿದ್ದ.
ಅಲ್ಲದೆ, ಸಹಿ ಪುಸ್ತಕದಲ್ಲಿ ರುಜು ಮಾಡುವುದು ಹಾಗೂ ಈ ಬಗ್ಗೆ ಪ್ರಶ್ನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು ೧೯೫೨ರ ನಿಯಮ ೧೦(೧)ಡಿ ಹಾಗೂ (೧೦)೩ರಡಿ ಈ ಆದೇಶ ಹೊರಡಿಸಲಾಗಿದೆ. ಅಮಾನುತ್ತುಗೊಂಡಿರುವ ಸಿಬ್ಬಂದಿಯು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್ ಎಸ್. ಮಳ್ಳೂರು ಆದೇಶದಲ್ಲಿ ತಿಳಿಸಿದ್ದಾರೆ.