ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಂಸದ ಪ್ರಲ್ಹಾದ ಜೋಶಿ ವಿರುಧ್ದ ಟೀಕೆ ಮಾಡಿ ಮಾತನಾಡದಿದ್ದರೆ ಉಂಡ ಊಟ ಕರಗುವುದಿಲ್ಲ ಹಾಗೂ ನಿದ್ರೆ ಬರದಷ್ಟು ಹತಾಶರಾಗಿದ್ದಾರೆ ಎಂದು ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಹಾಗೂ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಧಾರವಾಡದಲ್ಲಿ ನಡೆದ ರೈತರ ಹೊರಾಟದಲ್ಲಿ ಮಾತನಾಡುವಾಗ ವಿನಯ ಕುಲಕರ್ಣಿ ಸಂಸದ ಪ್ರಲ್ಹಾದ ಜೋಶಿ ವಿರುದ್ದ ಗಂಭೀರ ಆಪಾದನೆ ಮಾಡಿದ್ದಾರೆ. ಹಿಂದಿನ ಮುರುಘಾಮಠದ ಸ್ವಾಮಿಗಳಿಗೆ ಹಣ ನೀಡಿ ಹೇಳಿಕೆ ಕೊಡಸಿದ್ದಾರೆ ಎಂದು ಹೇಳಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ರೈತರ ಬಗ್ಗೆ ವಿನಯ ಕುಲಕರ್ಣಿಯವರಿಗೆ ನಿಜವಾದ ಕಾಳಜಿ ಇದ್ದರೆ ಕೇಂದ್ರ ಸರಕಾರದಿಂದ ಪ್ರಲ್ಹಾದ ಜೋಶಿ ಪ್ರಯತ್ನಿಸಿ ತಂದಿರುವ ಹೆಸರು ಮತ್ತು ಮೆಣಸಿನಕಾಯಿ ಬೆಂಬಲ ಬೆಲೆ ರಾಜ್ಯ ಸರಕಾರದಿಂದ ರೈತರಿಗೆ ಸಮಪರ್ಕವಾಗಿ ದೊರಯುವಂತೆ ಮಾಡಲಿ ಮತ್ತು ಇತ್ತಿಚಿಗೆ ಹೋರಾಟ ಕೈಗೊಂಡ ಕಬ್ಬು ಬೆಳೆದ ರೈತರಿಗೆ ರಾಜ್ಯ ಸರಕಾರದಿಂದ ಹಣ ದೊರೆಯುವಂತೆ ಮಾಡಲಿ. ಅದನ್ನು ಬಿಟ್ಟು ತಾವು ಮಾಡಿದ ಕೃತ್ಯಗಳಿಗೆ ಬಾಧಿತರು ಧ್ವನಿ ಎತ್ತಿದರೆ ಅದರ ಹಿಂದೆ ಬಿ.ಜೆ.ಪಿ ನಾಯಕರಿದ್ದಾರೆಂದು ಹೇಳಿ ಮಾಜಿ ಸಚಿವರು ಹಾಸ್ಯಾಸ್ಪದಕ್ಕೆ ಈಡಾಗುತ್ತಿದ್ದಾರೆ.
ವಿನಯ ಕುಲಕರ್ಣಿ ಸುಳ್ಳು ಹೇಳುತ್ತಾ, ಯಾವಾಗಲೂ ಕೊಳಕು ರಾಜಕೀಯವನ್ನೇ ಮಾಡುವ ಚಟ ಮೈಗೂಡಿಸಿಕೊಂಡವರ ಬಾಯಿಯಿಂದ ಇಂತಹ ಸುಳ್ಳು ಹಾಗೂ ಕ್ಷುಲ್ಲಕ ಮಾತು ಹಾಗೂ ವಿಚಾರಗಳೇ ಹೊರಡುತ್ತವೆ ಹೊರೆತು ರಚನಾತ್ಮಕ ಯಾವುದೇ ಚಿಂತನೆ ಬರುವದಿಲ್ಲವೆಂದು ಎಂದು ಚುಚ್ಚಿದ್ದಾರೆ.
ಸಂಸದ ಪ್ರಲ್ಹಾದ ಜೋಶಿ ಆಗಲಿ ಇತರ ಯಾವುದೇ ಬಿ.ಜೆ.ಪಿ ನಾಯಕರುಗಳಾಗಲಿ ಯಾವುದೇ ಸಂದರ್ಭದಲ್ಲಿಯೂ ಮುರುಘಾಮಠದ ಹಿಂದಿನ ಸ್ವಾಮಿಗಳನ್ನು ಸಂರ್ಪಕಿಸಿಲ್ಲ. ವಿನಯ ಕುಲಕರ್ಣಿ ಹಿಂದೆ ಲೋಕ ಸಭಾ ಚುನಾವಣೆಯಲ್ಲಿ ಪ್ರಲ್ಹಾದ ಜೋಶಿ ವಿರುಧ್ದ ಹಾಗೂ ಇತ್ತೀಚಿಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶೋಚನೀಯ ಸೋಲು ಅನುಭವಿಸಿ ಆಘಾತದ ಸ್ಥಿತಿಯಲ್ಲಿರುವುದರಿಂದ ಹತಾಶೆ ಹಾಗೂ ಈ ತರಹದ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಮುರುಘಾಮಠದ ಹಳೆಯ ಸ್ವಾಮಿಗಳು ಸಂಸದ ಜೋಶಿಯಿಂದ ಹಣ ಪಡೆದಿದ್ದಾರೆ ಎನ್ನುವುದೇ ಅವರಿಗೆ ಮಾಡಿದ ದೊಡ್ಡ ಅಪಮಾನ. ಹಣ ನೀಡಿದ ಬಗ್ಗೆ ಧೈರ್ಯವಿದ್ದರೆ ವಿನಯ ಕುಲಕರ್ಣಿ ಸಾಕ್ಷಿ ಸಮೇತ ರುಜುವಾತು ಮಾಡಲಿ. ಇಲ್ಲದಿದ್ದರೆ ಅವರ ವಿರುಧ್ಧ ಮಾನ ನಷ್ಟ ಮೊಕದ್ದಮೆ ಹೂಡಲು ನಾವು ಹಿಂಜರಿಯುವುದಿಲ್ಲವೆಂದು ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಎಚ್ಚರಿಕೆ ನೀಡಿದ್ದಾರೆ.