ರಾಜ್ಯ

ಹಾಗಿದ್ದರೆ ನಾನು ನಾಲಾಯಕ್ ಮುಖ್ಯಮಂತ್ರಿನಾ ಎಂದ ಕುಮಾರಸ್ವಾಮಿ !

ಬೆಂಗಳೂರು : ನಾಡಿನ ಮಹಿಳೆಗೆ ಅಪಮಾನ ಮಾಡಿದ್ದರೆ ಒಂದು ಸೆಂಕೆಂಡ್ ಕೂಡ ಈ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಬಯಸಲ್ಲ. ನಾನು ಪ್ರತಿಯೊಬ್ಬರಿಗೂ ಗೌರವ ಕೊಟ್ಟಿದ್ದೇನೆ. ನಾನು ಈ ಬಗ್ಗೆ ಬಹಿರಂಗ ಚರ್ಚೆಗೆ ಕೂಡ ಸಿದ್ದನಿದ್ದೇನೆ. ರೈತರು ನಡೆದುಕೊಳ್ಳವ ರೀತಿ ಸರಿಯಿಲ್ಲ ಎಂದು ರೈತ ಮಹಿಳೆಯ ವಿರುದ್ದವೇ ಸಿಎಂ ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು.

ಅವರು ಸೋಮವಾರ ಸಂಜೆ ವಿಧಾನಸೌಧದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠೀಯ ಉದ್ದಕ್ಕೂ ರೈತರ ಪ್ರತಿಭಟನೆ ಬಗೆ, ಮಾಧ್ಯಮಗಳು ಸುದ್ದಿ ತೋರಿಸುವ ಹಪಾಹಪಿ, ಬಿಜೆಪಿಯ ಕುಮ್ಮಕ್ಕಿನ ವಿರುದ್ದವೇ ಮಾತನಾಡಿದರು.

ಆ ರೈತ ಮಹಿಳೆ ನನಗೆ ನಾಲಾಯಕ್ ಅಂದಿದ್ದಾಳೆ. ಹಾಗಿದ್ದರೆ ನಾನು ನಾಲಾಯಕ್ ಮುಖ್ಯಮಂತ್ರಿನಾ, ನಾನು ಕುಮಾರಸ್ವಾಮಿಯಾಗಿ ಕ್ಷಮಿಸಬಹುದು. ಆದರೆ ಅದು ರಾಜ್ಯದ ಜನತೆಗೆ ಮಾಡಿದ ಅಗೌರವ, ಅಪಮಾನ, ನಾನು ಅದನ್ನು ಅನಿಸಿಕೊಂಡು ಸುಮ್ಮನಾದರೆ ನಾಲಾಯಕ್ ಎಂದು ಒಪ್ಪಿಕೊಂಡಂತೆ ಅಲ್ಲವೇ ಎಂದು ಮಾಧ್ಯಮಗಳಿಗೆ ಪ್ರಶ್ನೇಯೇ ಮಾಡಿದರು.

ಹೀಗಾಗಿ ನಾನು ಅವರಿಗೆ ತಕ್ಷಣ ಅರೆಸ್ಟ್ ಮಾಡಿ ಅಂತ ಹೇಳಿದ್ದೇನೆ. ಅದು ಮೊದಲ ಬಾರಿಗೆ ಎಂದು ಹೇಳಿದ ಅವರು ರೈತರು ಕಲ್ಲು ತೆಗೆದುಕೊಂಡು ಹೋಗಿ ಸುವರ್ಣಸೌಧದ ಗೇಟ್ ಒಡೆಯುವುದು ಅಪರಾಧವಲ್ಲವೇ ಹಾಗಿದ್ದರೆ ನಾನು ಅದನ್ನು ನೋಡಿ ಸುಮ್ಮನೇ ಕುಳಿತುಕೊಳ್ಳಬೇಕು ಎಂದು ಮರು ಸವಾಲ್ ಹಾಕಿದರು.

ಅಲ್ಲದೆ, ಪೊಲೀಸರಿಗಿಂತ ಮೊದಲು ನೀವು ಅಲ್ಲಿಗೆ ಹೇಗೆ ತಲುಪಿದಿದ್ದೀರಿ. ನಿಮಗೆ ಮಾಹಿತಿ ಕೊಟ್ಟವರು ಯಾರು, ಯಾಕೆ ನೀವು ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಮಾಧ್ಯಮಗಳ ವಿರುದ್ದ ಬೇಸರ ವ್ಯಕ್ತಪಡಿಸಿದರು.

ಎಲ್ಲಡೆ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಮಹಿಳೆಗೆ ನೋವುಂಟು ಮಾಡುವ ಉದ್ದೇಶದಿಂದ ಹೇಳಿಲ್ಲ. ಅವಳ ಮನಸ್ಸಿಗೆ ನೋವಾಗಿದ್ದರೆ ಪದ ವಾಪಾಸ್ ಪಡೆಯುತ್ತೇನೆ ಎಂದು ಸಮಜಾಯಿಸಿ ನೀಡಿದರು.

ರಾಜ್ಯದ ಕೆಲವು ಭಾಗದಲ್ಲಿ ಕಬ್ಬು ಬೆಳೆಗಾರರ ಹೆಸರಿನಲ್ಲಿ ಸಣ್ಣ ಪುಟ್ಟ ಗುಂಪುಗಳು ಪ್ರತಿಭಟನೆ ನಡೆಸುತ್ತಿವೆ. ಇದಕ್ಕೆ ಪ್ರಾಯೋಜಿಕತ್ವ ನೀಡಲಾಗಿದೆ ಎಂಬುದು ನಮಗೂ ಗೊತ್ತಿದೆ ಎಂದು ಹೇಳಿದ ಅವರು ಸರಕಾರದ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಎಲ್ಲ ರೀತಿಯಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲಿ. ಅದನ್ನು ಬಿಟ್ಟು ಆ ಗುಂಪುಗಳ, ಬೆಳಗಾರರ ಹೆಸರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಕರೆದು ಇಡೀ ರಾಜ್ಯಾದ್ಯಂತ ಹೋರಾಟ ವಿಸ್ತರಿಸುವ ಹಾಗೂ ಚಳುವಳಿ ತೀವ್ರಗೊಳಿಸುವ ಸೂಚನೆ ನೀಡ್ತಿರಾ. ಬನ್ನಿ ನೋಡೋಣ ಚಳುವಳಿ ಮಾಡ್ತೀರಾ ಮಾಡಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸವಾಲ್ ಹಾಕಿದರು.

Please follow and like us:

Leave a Reply

Your email address will not be published. Required fields are marked *