ಬೆಂಗಳೂರು : ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಸಮ್ಮೀಶ್ರ ಸರಕಾರದ ಪ್ರಭಾವಿ ಸಚಿವ ಮತ್ತು ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವ ಸಚಿವ ರಮೇಶ ಜಾರಕಿಹೊಳಿ ಮಂಗಳವಾರ ಬೆಂಗಳೂರಿನಲ್ಲಿಯೇ ಇದ್ದರೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರೊಂದಿಗೆ ನಡೆಸಿದ ಸಭೆಯಿಂದ ದೂರ ಉಳಿದಿದ್ದರು.
ಸರಕಾರದ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ನಾನು ಸಭೆಯಿಂದ ದೂರ ಉಳಿದಿದ್ದೇನೆ. ಇಲ್ಲದಿದ್ದರೆ ಅದಕ್ಕೆ ಮತ್ತು ತಪ್ಪು ಅಪಾರ್ಥ ಕಲ್ಪಿಸುವ ಕೆಲಸ ನಡೆಯಬಾರದು ಎಂದರು.
ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ರೈತರಿಗೆ ಬಾಕಿ ಹಣ ಉಳಿಸಿಕೊಂಡಿರುವುದು ನಿಜ. ಆದರೆ 20 ಕೋಟಿ ಬಾಕಿ ಎಲ್ಲ ಕೇವಲ ಊಹಾಪೋಹ. ಈ ಮಾತಿನಲ್ಲಿ ಯಾವುದೇ ಹುರಳಿಲ್ಲ. ಒಂದು ವೇಳೆ ನಾನು ರೈತರಿಂದ 20 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ತೋರಿಸಿದರೆ ನಾನು ಒಂದು ಕ್ಷಣವೂ ಸಚಿವ ಸ್ಥಾನದಲ್ಲಿ ಮುಂದುವರೆಯಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ತಮ್ಮ ರಾಜಕೀಯ ಎದುರಾಳಿಗಳಿಗೆ ಬಹಿರಂಗವಾಗಿಯೇ ಸವಾಲ್ ಹಾಕಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ ಯಾವುದೇ ತೀರ್ಮಾನ ಕೈಗೊಂಡರೂ, ಅದಕ್ಕೆ ನಾನು ಬದ್ಧವಾಗಿರುತ್ತೇನ. ಆನಂತರ ಈ ಸ್ವತಃ ತಾವೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ವಾಸ್ತವಾಂಶಗಳನ್ನು ಅವರ ಎದುರು ಇಡುತ್ತೇನೆ ಎಂದು ಹೇಳಿದರು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬೆಂಗಳೂರಿನ ನಿವಾಸದಲ್ಲಿಯೇ ಉಳಿದುಕೊಂಡಿದ್ದ ಸಚಿವ ರಮೇಶ ಜಾರಕಿಹೊಳಿ ಆನಂತರ ಅಲ್ಲಿಂದ ತೆರಳಿದರು.
ಒಟ್ಟಿನಲ್ಲಿ ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ, ಹಾಗೂ ಅವರ ಸಹೋದರ ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾಲೀಕತ್ವದ ಸತೀಶ್ ಶೂಗರ್ಸ್ ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡಿರುವುದಂತೂ ಸತ್ಯ. ಅದು ಈಗ ರಾಜಕೀಯ ಪರ ವಿರೋಧಕ್ಕೆ ವೇದಿಕೆಯಾಗಿದೆ. ಇದಕ್ಕೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಸಹೋದರರು ಯಾವ ರೀತಿ ತಿರುಗೇಟು ನೀಡುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.