ಗದಗ : ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡುವಂತೆ ರಾಜ್ಯ ಸರಕಾರದ ಶಿಪಾರಸ್ಸನ್ನು ಕೇಂದ್ರ ಸರಕಾರವು ತಿರಸ್ಕರಿಸಿರುವುದು ಖಂಡನೀಯ ಹಾಗೂ ವಿವೇಚನಾ ರಹಿತ ಕ್ರಮವಾಗಿದೆ ಎಂದು ಗದಗನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಟೀಕಿಸಿದರು.
ಇದು ಸಮಸ್ತ ಲಿಂಗಾಯತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ. ಈ ಸಂವಿಧಾನ ವಿರೋಧಿ ಕ್ರಮವನ್ನು, ಬಲವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.
ಲಿಂಗಾಯತರು ತಮ್ಮ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೇಳುತ್ತಿರುವುದು ಯಾವುದೇ ಭಿಕ್ಷೆಯಲ್ಲ, ಅದು ಲಿಂಗಾಯತರ ಸಂವಿಧಾನ ಬದ್ಧ ಹಕ್ಕು ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರವು ಈ ಧರ್ಮಕ್ಕೆ ಮಾನ್ಯತೆಯನ್ನು ನೀಡುವ ಮೂಲಕ ಕೋಟ್ಯಂತರ ಲಿಂಗಾಯತರ ಭಾವನೆಗಳನ್ನು ಗೌರವಿಸಬೇಕಾಗಿತ್ತು. ಆದರೆ ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದಿರುವ ಹೋರಾಟವು ಜೈನ, ಬೌದ್ಧ, ಸಿಖ್ಖ ಧರ್ಮೀಯರಂತೆ ಲಿಂಗಾಯತರ ಅಸ್ಮಿತೆಯ ಹೋರಾಟವಾಗಿದೆ ಎಂದು ಹೇಳಿದ್ದಾರೆ.
ಭಾರತದ ಪ್ರಪ್ರಥಮ ವಿಚಾರವಾದಿ ಹಾಗೂ ಜಗತ್ತಿಗೆ ಮೊಟ್ಟಮೊದಲ ಪಾರ್ಲಿಮೆಂಟ್ ನ್ನು ಪರಿಚಯಿಸಿದ ಮಹಾಮಾನವತಾವಾದಿ ಬಸವಣ್ಣನವರನ್ನು ಕುರಿತು ಸಾಕಷ್ಟು ಅಧ್ಯಯನ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಿಂಗಾಯತ ಧರ್ಮವು ತಾತ್ವಿಕವಾಗಿ ಸಾಮಾಜಿಕವಾಗಿ ಹಿಂದು ಧರ್ಮಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಧರ್ಮವನ್ನು ಸ್ವತಂತ್ರಧರ್ಮವೆಂದು ಮಾನ್ಯಮಾಡುವುದರಿಂದ ಈ ಧರ್ಮದ ವ್ಯಾಪ್ತಿಯಲ್ಲಿ ಬರುವ ಯಾವುದೇ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇದೂ ಅಲ್ಲದೆ ದೇಶದ ಯಾವುದೇ ಸಮುದಾಯವು ಈ ರೀತಿ ಸ್ವತಂತ್ರಧರ್ಮದ ಮಾನ್ಯತೆಯನ್ನೂ ಕೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲಿಂಗಾಯತ ಧರ್ಮದ ತಾತ್ವಿಕ ನೆಲೆಗಟ್ಟು ಯಾವ ಸಮುದಾಯಕ್ಕೂ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕ್ರಮ ಸೂಕ್ತವಲ್ಲ. ಇದರ ಪರಿಣಾಮವನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಈಗಲೂ ಕಾಲ ಮಿಂಚಿಲ್ಲ. ತಿರಸ್ಕೃತ ಪ್ರಸ್ತಾವನೆಯನ್ನು ಪುನಃ ಪರಿಶೀಲಿಸಬೇಕೆಂದು ಗದಗನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಗ್ರಹಪೂರ್ವಕವಾಗಿ ಒತ್ತಾಯಿಸಿದ್ದಾರೆ.