ರಾಜ್ಯ

ಸಚಿವ ರೇವಣ್ಣ ವಿರುದ್ದ ಸಿದ್ದರಾಮಯ್ಯಗೆ ದೂರು ನೀಡಿದ ಕಾಂಗ್ರೆಸ್ಸಿಗರು

ಬೆಂಗಳೂರು : ಹಾಸನ ಜಿಲ್ಲೆಯ ಪ್ರತಿಯೊಂದು ವಿಷಯದಲ್ಲಿ ಲೋಕೋಪಯೋಗಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಮೂಗು ತೂರಿಸುತ್ತಿದ್ದಾರೆ. ಇದರಿಂದಾಗಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆಯೇ ಇಲ್ಲದಂತೆ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ಗೋಪಾಲಸ್ವಾಮಿ ಹಾಗೂ ಹೆಚ್. ಕೆ. ಮಹೇಶ, ಮಂಜೇಗೌಡ ಸೇರಿ 50ಕ್ಕೂ ಹೆಚ್ಚು ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಅವರ ನೇತೃತ್ವದಲ್ಲಿ ಮೂನ್ನೂರಕ್ಕೂ ಹೆಚ್ಚು ಜನರ ನಿಯೋಗ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ರೇವಣ್ಣ ಅವರು ಸಮ್ಮೀಶ್ರ ಸರಕಾರದ ಧರ್ಮ ಪಾಲನೆ ಸರಿಯಾಗಿ ಮಾಡುತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ನಮ್ಮ ಹಕ್ಕು ನಮಗೆ ಕೊಡಿ, ನಾವು ಅವರ ವಿರುದ್ದ ಬಾಯಿ ಬಿಟ್ಟು ಹೇಳುವ ಹಾಗಿಲ್ಲ. ನಮ್ಮ ಪಾಲನ್ನು ನಮಗೆ ಕೊಡಿಸಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರು ಬಂದಿದ್ದೇವೆ. ಡಿ ಕೆ ಶಿವಕುಮಾರ, ಪರಮೇಶ್ವರ ಅವರಿಗೂ ಭೇಟಿ ಮಾಡಿ ನಮ್ಮ ಬೇಡಿಕೆಗಳು, ತೊಂದರೆಗಳನ್ನು ಗಮನಕ್ಕೆ ತರುತ್ತೇವೆ ಎಂದರು.

ನಾವು ನಮ್ಮ ಪಾಲು ನಾವು ಕೇಳುತ್ತಿದ್ದೇವೆ. ನಮ್ಮ ಧರ್ಮ ಪಾಲನೆ ನಾವು ಮಾಡುತ್ತಿದ್ದೇವೆ. ಆದರೆ ಅವರು ಪಾಲಿಸುತ್ತಿಲ್ಲ. ಈಗ ಅಂತಿಮ ಹಂತಕ್ಕೆ ಬಂದು ತಲುಪಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೇಟ್ ನೀಡಿ ಎಂದು ಮನವಿ ಮಾಡಿದ್ದೇವೆ. ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ನ್ಯಾಯ ಕೊಡಿಸುವ ಭರವಸೆ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಜಾವಗಲ್ ಮಂಜುನಾಥ್ ತಿಳಿಸಿದರು.

ಕಾಂಗ್ರೆಸ್ ಬೆಂಬಲ ಪಡೆದು ನಮ್ಮ ಮೇಲೆಯೇ ದಬ್ಬಾಳಿಕೆ ಮಾಡಲಾಗುತ್ತಿದೆ. ಕಾಂಗ್ರೆಸ್ ಮುಖಂಡರ ಕೆಲಸ ಕಾರ್ಯಗಳು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರ ಮೇಲೆಯೇ ಸುಳ್ಳು ಮೊಕದ್ದಮೆ ದಾಖಲಿಸಿ ಹಿಂಸೆ ನೀಡಲಾಗುತ್ತಿದೆ. ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ನೆಲೆಯೇ ಇಲ್ಲದಂತೆ ಮಾಡಲಾಗುತ್ತಿದೆ. ನಮ್ಮ ಬೆಂಬಲ ಪಡೆದು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ದೂರಿದರು.

ರೇವಣ್ಣ ಎಲ್ಲ ವಿಷಯದಲ್ಲಿ ಮೂಗು ತೂರಿಸುತ್ತಿದ್ದಾರೆ. ಪಕ್ಷ ಸಂಘಟನೆ ವಿಷಯದಲ್ಲಿ ಕೂಡ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ರೇವಣ್ಣ ವಿರುದ್ದ ಕಿಡಿ ಕಾರಿದ ಕಾಂಗ್ರೆಸ್ ಮುಖಂಡರು ರಾಜಕೀಯವಾಗಿ ನೆಲೆಯೇ ಇಲ್ಲದಂತೆ ಮಾಡಲಾಗುತ್ತಿದೆ. ನಮ್ಮ ಬೆಂಬಲ ಪಡೆದು ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ ರೇವಣ್ಣ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ದೂರು ನೀಡಿದರು.

ಇದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Please follow and like us:

Leave a Reply

Your email address will not be published. Required fields are marked *